ನೀರಿನ ಮಿತ ಬಳಕೆಯ ಅರಿವು ಅಗತ್ಯ: ದ.ಕ.ಜಿಲ್ಲಾಧಿಕಾರಿ ರವಿಕುಮಾರ್

ಮಂಗಳೂರು: ಸಕಲ ಜೀವ ರಾಶಿಗಳಿಗೆ ಜೀವನಾಧಾರವಾದ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ. ನೀರಿನ ಮಿತ ಬಳಕೆ ಇಂದಿನ ಅಗತ್ಯವಾಗಿದ್ದು, ಕುಡಿಯುವ ನೀರು ವ್ಯರ್ಥ ಪೋಲಾಗದಂತೆ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ರವಿಕುಮಾರ್.ಎಂ.ಆರ್. ಹೇಳಿದ್ದಾರೆ.
ದ.ಕ. ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ಯೂತ್ ರೆಡ್‌ಕ್ರಾಸ್ ಮಂಗಳೂರು ವಿಶ್ವ ವಿದ್ಯಾನಿಲಯ, ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಜಲಜಾಗೃತಿ ಅಭಿಯಾನಕ್ಕೆ ಶನಿವಾರ ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಸಕಾಲದಲ್ಲಿ ಮಳೆಯಾಗದ ಕಾರಣ ಜಿಲ್ಲೆಯ ಜೀವನದಿಗಳು ಬರಿದಾಗಿವೆ. ನಾಗರಿಕರಿಗೆ ನೀರು ಪೂರೈಕೆ ಮಾಡುವುದು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಜನತೆಯ ಸಹಕಾರ ಅಗತ್ಯವಿದೆ. ನೀರಿನ ಮಿತ ಬಳಕೆ ನಮ್ಮ ದಿನಚರಿಯಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ನಿರ್ದೇಶಕ ಪಿ.ಬಿ.ಹರೀಶ್ ರೈ, ರವೀಂದ್ರನಾಥ ಉಚ್ಚಿಲ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಾಧ್ಯಾಪಕಿಯರಾದ ಡಾ.ಭಾರತಿ ಪಿಲಾರ್, ನಯನಕುಮಾರಿ, ದೀಕ್ಷಿತ. ಉಪಸ್ಥಿತರಿದ್ದರು. ಮಂಗಳೂರು ವಿ.ವಿ. ಯೂತ್ ರೆಡ್‌ಕ್ರಾಸ್ ಸಂಯೋಜನಾಧಿಕಾರಿ ಡಾ.ಗಣಪತಿ ಗೌಡ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರು ವಿ.ವಿ. ಕಾಲೇಜು , ರಥಬೀದಿ ಸರ್ಕಾರಿ ಕಾಲೇಜು, ಬೆಸೆಂಟ್ ಕಾಲೇಜು ಮತ್ತು ತೃಷಾ ಕಾಲೇಜಿನ ಯೂತ್ ರೆಡ್‌ಕ್ರಾಸ್ ಸದಸ್ಯರು ಬಲ್ಮಠ ಪ್ರದೇಶದ ಅಪಾರ್ಟ್‌ಮೆಂಟ್ ಹಾಗೂ ಮನೆಗಳಿಗೆ ತೆರಳಿ ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರಗಳನ್ನು ಹಂಚಿದರು.
ಮರೆಯದೆ ಮತದಾನ ಮಾಡಿ
ಮತದಾನ ಪವಿತ್ರವಾದ ಹಕ್ಕು. ವಿದ್ಯಾಥಿಗಳು ತಪ್ಪದೆ ಮತ ಚಲಾಯಿಸಬೇಕು. ಜಲಜಾಗೃತಿ ಅಭಿಯಾನದ ಜತೆ ತಮ್ಮ ನೆರೆಹೊರೆಯವರಲ್ಲಿ ಮತದಾನದ ಬಗ್ಗೆಯೂ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ರವಿಕುಮಾರ್ ವಿನಂತಿಸಿದರು.