ಮಂಗಳನಲ್ಲಿ ನೀರಿನ ಕುರುಹು ಪತ್ತೆಹಚ್ಚಿದ ಚೀನಾದ ಗಗನನೌಕೆ

ಬೀಜಿಂಗ್, ಎ.30: ಮಂಗಳ ಗೃಹದಲ್ಲಿ ಇತ್ತೀಚಿಗಿನ ನೀರಿನ ಚಟುವಟಿಕೆ(ಲಭ್ಯವಿರುವ ನೀರಿನ ಪ್ರಮಾಣ)ಯ ಕುರುಹನ್ನು ಚೀನಾದ ರೋವರ್ ನೌಕೆ ಪತ್ತೆಹಚ್ಚಿದ್ದು, ಜೀವನವು ಅಸ್ತಿತ್ವದಲ್ಲಿರಲು ಸೂಕ್ತವಾದ ಪರಿಸ್ಥಿತಿಯಿರುವ ಕೆಲವು ಪ್ರದೇಶಗಳನ್ನು ಮಂಗಳಗೃಹ ಹೊಂದಿರುವುದನ್ನು ಇದು ಸೂಚಿಸುತ್ತದೆ ಎಂದು ವರದಿಯಾಗಿದೆ.
2021ರಲ್ಲಿ ಮಂಗಳನಲ್ಲಿ ಇಳಿದಿರುವ ಝುರೋಂಗ್ ರೋವರ್ ನೌಕೆಯು ಕಡಿಮೆ ಅಕ್ಷಾಂಶಗಳಲ್ಲಿ ಮರಳಿನ ದಿಬ್ಬಗಳ ಮೇಲೆ ದ್ರವರೂಪದ ನೀರಿನ ಪುರಾವೆಗಳನ್ನು ಪತ್ತೆಹಚ್ಚಿದೆ ಎಂದು `ಸೈಯನ್ಸ್ ಅಡ್ವಾನ್ಸಸ್'ನಲ್ಲಿ ಪ್ರಕಟವಾದ ಲೇಖನದಲ್ಲಿ ತಿಳಿಸಲಾಗಿದೆ.
ಮಂಗಳ ಗ್ರಹವು ಒಂದು ಕಾಲದಲ್ಲಿ ಭೂಮಿಯಂತಹ ಹವಾಮಾನವನ್ನು ಹೊಂದಿತ್ತು ಮತ್ತು ಸುಮಾರು 3 ಶತಕೋಟಿ ವರ್ಷಗಳ ಹಿಂದೆ ಅದರ ಮೇಲ್ಮೈಯಲ್ಲಿ ಹರಿಯುವ ಸಾಗರವನ್ನು ಹೊಂದಿತ್ತು . ಆದರೆ ನಾಟಕೀಯ ಹವಾಮಾನ ಬದಲಾವಣೆಗಳಿಂದ ಬಹುತೇಕ ನೀರು ಹೆಪ್ಪುಗಟ್ಟಿದವು ಮತ್ತು ಅದರಲ್ಲಿ ಹೆಚ್ಚಿನವು ಗ್ರಹದ ಹೊರಪದರದಲ್ಲಿ ಸಿಕ್ಕಿಬಿದ್ದಿರಬಹುದು ಎಂದು ಎಂದು ವಿಜ್ಞಾನಿಗಳು ದೀರ್ಘಕಾಲದಿಂದ ನಂಬಿದ್ದರು. ಆದರೆ ಇದುವರೆಗೆ ಮಂಗಳನಲ್ಲಿ ಕಡಿಮೆ ಅಕ್ಷಾಂಶಗಳಲ್ಲಿ ದ್ರವ ನೀರಿನ ಉಪಸ್ಥಿತಿಯನ್ನು ತೋರಿಸಲು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಇದೀಗ ಮೊದಲ ಬಾರಿಗೆ ರೋವರ್ ಮಂಗಳದ ಸಣ್ಣ ದಿಬ್ಬಗಳ ಮೇಲೆ ಬಿರುಕುಬಿಟ್ಟ ಪದರಗಳನ್ನು ಕಂಡುಹಿಡಿದಿದೆ. ಇದು ಮಂಗಳಗ್ರಹವು 4 ಲಕ್ಷ ವರ್ಷಗಳ ಹಿಂದೆ ಉಪ್ಪು-ಸಮೃದ್ಧ ನೀರಿನ ಪ್ರಪಂಚವಾಗಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಅಧ್ಯಯನ ವರದಿಯ ಲೇಖನ ತಿಳಿಸಿದೆ.