ಚೀನಾ ಪ್ರಚೋದನಕಾರಿ ಕೃತ್ಯ ನಿಲ್ಲಿಸಲಿ: ಅಮೆರಿಕ ಆಗ್ರಹ

ವಾಷಿಂಗ್ಟನ್, ಎ.30: ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಚೋದನಕಾರಿ ಮತ್ತು ಅಸುರಕ್ಷಿತ ನಡವಳಿಕೆಯನ್ನು ನಿಲ್ಲಿಸುವಂತೆ ಅಮೆರಿಕವು ಚೀನಾವನ್ನು ಆಗ್ರಹಿಸಿದೆ.
ಇತ್ತೀಚೆಗೆ ದಕ್ಷಿಣ ಚೀನಾ ಸಮುದ್ರಪ್ರದೇಶದಲ್ಲಿ ಸಂಚರಿಸುತ್ತಿದ್ದ ಫಿಲಿಪ್ಪೀನ್ಸ್ನ ಹಡಗಿಗೆ ಚೀನಾದ ನೌಕೆಗಳು ಮುಖಾಮುಖಿಯಾದ ಘಟನೆ ವರದಿಯಾದ ಹಿನ್ನೆಲೆಯಲ್ಲಿ ಅಮೆರಿಕ ಈ ಹೇಳಿಕೆ ನೀಡಿದೆ.
ಈ ಘಟನೆಯು ವಿವಾದಿತ ಜಲಮಾರ್ಗದಲ್ಲಿ ಚೀನಾ ನಡೆಸುತ್ತಿರುವ ಕಿರುಕುಳ ಮತ್ತು ಹಸ್ತಕ್ಷೇಪಕ್ಕೆ ನಿದರ್ಶನವಾಗಿದೆ. ಚೀನಾ ತಕ್ಷಣ ತನ್ನ ಪ್ರಚೋದನಕಾರಿ ಮತ್ತು ಅಸುರಕ್ಷಿತ ವರ್ತನೆಯನ್ನು ನಿಲ್ಲಿಸಬೇಕು. ಫಿಲಿಪ್ಪೀನ್ಸ್ ನ ಸಶಸ್ತ್ರಪಡೆಗಳ ಮೇಲೆ ಯಾವುದೇ ದಾಳಿ ನಡೆದರೂ ಅಮೆರಿಕ ಅದಕ್ಕೆ ಸೂಕ್ತರೀತಿಯಲ್ಲಿ ಪ್ರತಿಕ್ರಿಯಿಸಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಹೇಳಿದ್ದಾರೆ.
ದಕ್ಷಿಣ ಚೀನಾ ಸಮುದ್ರಪ್ರದೇಶದಲ್ಲಿ ಚೀನಾ ಹಾಗೂ ಫಿಲಿಪ್ಪೀನ್ಸ್ ಮಧ್ಯೆ ದೀರ್ಘಾವಧಿಯಿಂದ ವಿವಾದ ಹೊಗೆಯಾಡುತ್ತಿದೆ. ಸಂಪೂರ್ಣ ದಕ್ಷಿಣ ಚೀನಾ ಸಮುದ್ರಪ್ರದೇಶದ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ. ಆದರೆ ಈ ಪ್ರತಿಪಾದನೆಗೆ ಯಾವುದೇ ಆಧಾರವಿಲ್ಲ ಎಂದು ಅಂತರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದೆ. ಕಳೆದ ರವಿವಾರ ದಕ್ಷಿಣ ಚೀನಾ ಸಮುದ್ರವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಫಿಲಿಪ್ಪೀನ್ಸ್ ಕರಾವಳಿ ಕಾವಲು ಪಡೆಯ ದೋಣಿಗಳ ಮಾರ್ಗಕ್ಕೆ ಚೀನಾದ ಕರಾವಳಿ ಕಾವಲು ಪಡೆಯ ದೋಣಿಯೊಂದು ಅಡ್ಡಬಂದಿತ್ತು.
ಎರಡೂ ದೋಣಿಗಳ ನಡುವೆ ಕೇವಲ 45 ಮೀಟರ್ ಅಂತರವಿದ್ದು ಇನ್ನೇನು ಮುಖಾಮುಖಿ ಡಿಕ್ಕಿಯಾಗುವ ಹಂತದಲ್ಲಿ ಫಿಲಿಪ್ಪೀನ್ಸ್ ದೋಣಿಯ ಕಮಾಂಡಿಂಗ್ ಅಧಿಕಾರಿಯ ಕ್ಷಿಪ್ರ ನಡೆಯು ಸಂಭಾವ್ಯ ಅಪಘಾತವನ್ನು ತಪ್ಪಿಸಿದೆ ಎಂದು ಫಿಲಿಪ್ಪೀನ್ಸ್ ಕರಾವಳಿ ಕಾವಲು ಪಡೆಯ ದೋಣಿಯಲ್ಲಿದ್ದ ಎಎಫ್ಪಿ ಸುದ್ಧಿಸಂಸ್ಥೆಯ ವರದಿಗಾರರು ಮಾಹಿತಿ ನೀಡಿದ್ದಾರೆ.
ಫಿಲಿಪ್ಪೀನ್ಸ್ನ ದೋಣಿಗಳು ಚೀನಾದ ಅನುಮತಿಯಿಲ್ಲದೆ ಒಳನುಗ್ಗಿದವು. ಇದೊಂದು ಪೂರ್ವನಿಯೋಜಿತ ಪ್ರಚೋದನಕಾರಿ ಕೃತ್ಯ ಎಂದು ಚೀನಾದ ವಿದೇಶಾಂಗ ಸಚಿವಾಲಯ ಆರೋಪಿಸಿದೆ.