ಚುನಾವಣೆ ಹೊಸ್ತಿಲಲ್ಲೇ ಕಣದಿಂದ ಹಿಂದೆ ಸರಿದ JDS ಅಭ್ಯರ್ಥಿ: ಕಾಂಗ್ರೆಸ್ ಗೆ ಬೆಂಬಲ ಘೋಷಣೆ
ಬಿಜೆಪಿ ಅಭ್ಯರ್ಥಿ ಯತ್ನಾಳ್ ವಿರುದ್ಧ ವಾಗ್ದಾಳಿ

ವಿಜಯಪುರ : ಜೆಡಿಎಸ್ ಪಕ್ಷದಿಂದ ನಗರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಬಂದೇನವಾಝ್ ಮಹಾಬರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿ ಚುನಾವಣಾ ಕಣದಿಂದ ಹಿಂದೆ ಸರಿದ್ದಾರೆ.
ರವಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿಲ್ಲ, ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ತಿರುಗಾಡಿ ಪಕ್ಷದ ಸ್ಥಿತಿಗತಿಯನ್ನು ಅವಲೋಕಿಸಿದಾಗ ಜೆಡಿಎಸ್ ಪಕ್ಷವೇ ಅಸ್ತಿತ್ವದಲ್ಲಿ ಇಲ್ಲ ಎನ್ನುವ ಭಾವನೆ ಉಂಟಾಗಿದೆ, ಬೂತ್ ಮಟ್ಟದಲ್ಲಿ ಕೆಲಸ ಮಾಡುವವರು ಇಲ್ಲದಂತಾಗಿದ್ದಾರೆ. ಇಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಹಣಾಹಣಿಯಿದ್ದು ನಾನು ಕನದಲ್ಲಿದ್ದುಕೊಂಡು ಹೀನಾಯವಾಗಿ ಸೋಲುವುದಕ್ಕಿಂತ ನಿವೃತ್ತಿಯಾಗುವುದೇ ಒಳಿತು ಎಂದು ಭಾವಿಸಿ ಕಣದಿಂದ ಹಿಂದೆ ಸರಿದಿದ್ದೇನೆ ಎಂದು ಮಾಹಿತಿ ನೀಡಿದರು.
ನಾನು ಯಾರದೇ ಒತ್ತಡಕ್ಕೆ ಮಣಿದಿಲ್ಲ,ಯಾರು ಯಾವುದೇ ರೀತಿಯ ಒತ್ತಡವು ಹೇರಿಲ್ಲ, ಹಣವು ಪಡೆದಿಲ್ಲ ನನ್ನ ಭಾಗವೇ ತಪೋಸ್ ಅಭಿಪ್ರಾಯ ಮೂಡಿಸುತ್ತಿದ್ದಾರೆ. ಅದಕ್ಕೆ ನಾನು ಹೆದರುವುದಿಲ್ಲ ಎಂದು ತಿರುಗೇಟು ನೀಡಿದರು. ನನ್ನ ನಿರ್ಧಾರವನ್ನು ಜೆಡಿಎಸ್ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಗಮನಕ್ಕೆ ತರುತ್ತೇನೆ, ಪಕ್ಷ ಸಂಘಟನೆಯೇ ಇಲ್ಲದ ಕಡೆ ಸ್ಪರ್ಧಿಸುವುದು ಸರಿಯಲ್ಲ ಎಂದರು.
40 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿದ್ದೇನೆ, 2008ರಲ್ಲಿ ಕಡಿಮೆ ಮತಗಳಿಂದ ಸೋತಿದ್ದೇನೆ, ಆದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಜೆಡಿಎಸ್ ಸೇರಿದ ಮೇಲೆ ನಾನು ಹೊರಬಂದಿದ್ದೆ. ಅವರೇ ನಮ್ಮ ಜೆಡಿಎಸ್ ಪಕ್ಷವನ್ನು ಹಾಳು ಮಾಡಿದವರು ಎಂದು ಶಾಸಕ ಯತ್ನಾಳ್ ವಿರುದ್ಧ ಮಹಾಬರಿ ವಾಗ್ದಾಳಿ ನಡೆಸಿದರು.
ನನ್ನ ನಿರ್ಧಾರದಿಂದ ಪಕ್ಷಕ್ಕೆ ಮುಜುಗರವಾಗುವ ಸನ್ನಿವೇಶ ಉಂಟಾಗಿದೆ ನಿಜ. ಆದರೆ ಹೀನಾಯವಾಗಿ ಸೋಲುವುದಕ್ಕಿಂತ ನಿವೃತ್ತಿಯೇ ವಾಸಿ ಎಂಬುದು ನನ್ನ ಅನಿಸಿಕೆ. ಕೋಮುವಾದ ಪಕ್ಷ ಬೆಂಬಲಿಸುವುದಕ್ಕಿಂತ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ಸರಿಯಾದ ನಿರ್ಧಾರ ಅಂತ ಕೆಲ ಹಿರಿಯರು ಸಲಹೆ ನೀಡಿದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮಹಾಬರಿ ಸ್ಪಷ್ಟಪಡಿಸಿದರು.