ಶಾಸಕ, ಸಚಿವನಾದರೂ ಬಂಗಲೆ ಕಟ್ಟಿಲ್ಲ: ರಮಾನಾಥ ರೈ

ಬಂಟ್ವಾಳ: ರಾಜ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಗಳಾಗುತ್ತಾರೆ ಎಂಬ ಮಾತಿದೆ. ಅದೇರೀತಿ ಇವತ್ತು ಉದ್ಯಮಿಗಳು ಜನಪ್ರತಿನಿಧಿ ಗಳಾಗುತ್ತಿರುವುದರಿಂದ ಅವರು ಎಲ್ಲವನ್ನೂ ಲಾಭದ ದೃಷ್ಟಿಯಿಂದ ನೋಡುತ್ತಿದ್ದಾರೆ. ಜನಸೇವೆಗಿಂತ ಭ್ರಷ್ಟಾಚಾರ ಎಸಗುವುದಕ್ಕೆ ಅವರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದು ಜನತೆಯನ್ನು ತೀರಾ ಸಂಕಷ್ಟಕ್ಕೀಡು ಮಾಡಿದೆ. ಆದರೆ ನಾನು ಜನಸೇವೆಗಾಗಿಯೇ ಬದುಕಿದವನು. ಶಾಸಕ, ಸಚಿವನಾದರೂ ನಗರಗಳಲ್ಲಿ ದೊಡ್ಡ ಬಂಗಲೆ ಕಟ್ಟಿಲ್ಲ. ನನ್ನ ಹಿರಿಯರು ಕೊಟ್ಟ ಮನೆಯಲ್ಲೇ ವಾಸಿಸುತ್ತಿದ್ದೇನೆ ಮತ್ತು ಅಲ್ಲಿಂದಲೇ ಜನಸೇವೆ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ನಾವೂರ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಪ್ರತಿಯೊಂದು ವಿಚಾರಕ್ಕೂ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆ ಪಕ್ಷದ ಮುಖಂಡರುಗಳೇ ಆಪಾದಿಸಿದ್ದಾರೆ. ಇಂತಹ ಭ್ರಷ್ಟ ಸರಕಾರ ಕಿತ್ತೆಸೆಯದೆ ಜನರಿಗೆ ನೆಮ್ಮದಿಯ ಜೀವನ ಮರಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಹಾಗೂ ಕಳೆದ ಐದು ವರ್ಷದಲ್ಲಿ ಬಿಜೆಪಿಗರ ಕೆಲಸಗಳನ್ನು ತುಲನೆ ಮಾಡಿ ಈ ಬಾರಿ ಮತ ನೀಡಿ ಎಂದು ವಿನಂತಿಸಿದ ರೈ, ಬಂಟ್ವಾಳದಲ್ಲಿ ಆಗಿರುವ ಬಹುತೇಕ ಸರಕಾರಿ ಕಟ್ಟಡಗಳು, ಕ್ಷೇತ್ರದ ಮೂಲೆ ಮೂಲೆಯಲ್ಲಿ ರಸ್ತೆಗಳು ನನ್ನ ಅವಧಿಯಲ್ಲಿಯೇ ಆಗಿರುವಂಥದ್ದು. ಆದರೆ ಈಗ ರಸ್ತೆಯ ಒಂದು ತುದಿಗೆ ಸ್ವಲ್ಪ ಕಾಂಕ್ರಿಟ್ ಹಾಕಿ ದೊಡ್ಡ ದೊಡ್ಡ ಫ್ಲೆಕ್ಸ್ ಗಳನ್ನು ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದುದರಿಂದ ಜನರು ನಿಜಾಂಶ ಅರಿತುಕೊಂಡು ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಬಂಟ್ವಾಳದ ಅಭಿವೃದ್ಧಿಯಲ್ಲಿ ಅವಿರತ ಶ್ರಮಿಸಿದ ರೈಗಳನ್ನು ನಾವು ಈ ಬಾರಿ ಅತ್ಯಂತ ಶ್ರಮಪಟ್ಟು ಗೆಲ್ಲಿಸಬೇಕು. ಅವರು ಗೆದ್ದರೆ ಬಡವರು, ಅಸಹಾಯಕರಿಗೆ ಬಲ ಬಂದಂತೆ. ಬಂಟ್ವಾಳದ ಅಭಿವೃದ್ಧಿಗೆ ಅವರು ಕಂಡ ಕನಸುಗಳು ಪೂರ್ಣಗೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯವಾದಿ ಸುರೇಶ್ ನಾವೂರು ಮನವಿ ಮಾಡಿದರು.
ಇದೇ ವೇಳೆ ನಾವೂರು ಗ್ರಾಮದ ದೇವಪ್ಪ ಕುಲಾಲ್, ಸೀತಾರಾಮ್ ಕುಲಾಲ್, ಪ್ರವೀಣ್ ಕುಲಾಲ್ ಹಾಗೂ ದೇವಸ್ಯ ಪಡೂರು ಗ್ರಾಮದ ಸಂತೋಷ ಕರ್ಕೇರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಮುಖಂಡರುಗಳಾದ ಅಶ್ವನಿ ಕುಮಾರ್ ರೈ, ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಇಬ್ರಾಹೀಂ ಕೈಲಾರ, ಉಮೇಶ್ ಕುಲಾಲ್, ಲವೀನಾ ವಿಲ್ಮಾ ಮೊರಾಸ್, ಲವೀನಾ ಶಾಂತಿ ಡಿಸೋಜ, ಎಂ. ಮುಹಮ್ಮದ್, ಫಾರೂಕ್, ಯೋಗೀಶ್, ಸುವರ್ಣ ಕುಮಾರ್ ಜೈನ್, ತ್ರಿಶಾಲಾ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

