ಪಾಕ್ ಪರ ಘೋಷಣೆ ಕೂಗಿ ಕೋಮು ಗಲಭೆ ಸೃಷ್ಟಿಸಲು ಸಂಚು ಆರೋಪ: ಬಿಜೆಪಿ ಅಭ್ಯರ್ಥಿ ಮುನಿರತ್ನ ಸೇರಿ ಮೂವರ ವಿರುದ್ಧ ದೂರು
ಕ್ರಮಕ್ಕೆ ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಆಗ್ರಹ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಪಕ್ಷೇತರ ಅಭ್ಯರ್ಥಿಯೊಬ್ಬರ ಮೂಲಕ ಪಾಕ್ ಪರ ಘೋಷಣೆ ಕೂಗಿ ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತಪ್ಪ ಆರೋಪಿಸಿದ್ದಾರೆ.
ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಅವರು, ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಪಕ್ಷೇತರ ಅಭ್ಯರ್ಥಿ ಆರಿಫ್ ಪಾಷಾ ಅಲಿಯಾಸ್ ಯಾರಬ್ ಮೂಲಕ ಕಾಂಗ್ರೆಸ್ ಪಕ್ಷ ಮತ್ತು ಅಭ್ಯರ್ಥಿಯಾದ ನನ್ನ ವಿರುದ್ಧ ಅಪಪ್ರಚಾರ ಮಾಡುವ ಹುನ್ನಾರದಿಂದ ಪ್ರಚೋದನಕಾರಿ ಕರಪತ್ರ ಮುದ್ರಿಸಿ ಹಂಚಿದ್ದಾರೆಂದು ದೂರಿದ್ದಾರೆ.
ಗಲಭೆ ಸೃಷ್ಟಿಸಲು ಸಂಚು ರೂಪಿಸಿರುವ ಪಕ್ಷೇತರ ಅಭ್ಯರ್ಥಿ ಯಾರಬ್ ಮತ್ತು ಆತನಿಗೆ ಪ್ರೇರಣೆ ನೀಡಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಮುನಿರತ್ನ ಹಾಗೂ ವೇಲು ನಾಯ್ಕ್ ಮುಂತಾದ ಬಿಜೆಪಿ ನಾಯಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕುಸುಮಾ ಒತ್ತಾಯಿಸಿದ್ದಾರೆ.
► ದೂರಿನಲ್ಲೇನಿದೆ?
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಯಾರಬ್ ಎಂಬುವವರು ಹಾಲಿ ಶಾಸಕರಾದ ಮುನಿರತ್ನ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು, ಅವರ ಬೆಂಬಲಿಗರಾಗಿ ಕ್ಷೇತ್ರದಾದ್ಯಂತ ಪರಿಚಿತರಾಗಿದ್ದಾರೆ. ದಿನಾಂಕ: 30-04-2023 ರಂದು ಚುನಾವಣಾ ಪ್ರಚಾರದಲ್ಲಿದ ತೊಡಗಿದ್ದ ಸಂದರ್ಭದಲ್ಲಿ ನನಗೆ ಯಾರಬ್ ಮುದ್ರಿಸಿದ ಕರಪತ್ರದ ಪ್ರತಿಯೊಂದು ದೊರಕಿದ್ದು ಕ್ಷೇತ್ರದ ಜನರಲ್ಲಿ ಗೊಂದಲ ಮೂಡಿಸುವ ಮತ್ತು ಚುನಾವಣಾ ಸಂದರ್ಭದಲ್ಲಿ ಅಶಾಂತಿ ಮೂಡಿಸುವ ಸಲುವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಮುನಿರತ್ನ ಅವರೊಂದಿಗೆ ಸೇರಿ ಷಡ್ಯಂತ್ರ ರೂಪಿಸಿರುವುದನ್ನು ಕರಪತ್ರ ನೋಡಿದರೆ ಅರಿವಾಗುತ್ತದೆ.
ಯಾರಬ್ ಮುದ್ರಿಸಿದ್ದ ಕರಪತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಭಾವಚಿತ್ರಗಳು ಮತ್ತು ಚಿಹ್ನೆಯ ಜೊತೆಗೆ ದುರುದ್ದೇಶಪೂರ್ವಕವಾಗಿ ಪಾಕಿಸ್ತಾನದ ಧ್ವಜವನ್ನು ಸೇರಿಸಿದ್ದಾರೆ. ಈ ಕರಪತ್ರದಲ್ಲಿ ಸ್ವಯಂಘೋಷಿತವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂದು ಘೋಷಿಸಿಕೊಂಡು ತಮ್ಮ ಬೆಂಬಲವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕುಸುಮ.ಹೆಚ್ ಅವರಿಗೆ ನೀಡುತ್ತಿರುವುದಾಗಿ ಮುದ್ರಿಸಿದ್ದಾರೆ.
ಯಾರಬ್ ಸಚಿವ ಮತ್ತು ಕ್ಷೇತ್ರದ ಶಾಸಕ ಮುನಿರತ್ನ, ಬಿಜೆಪಿ ಮುಖಂಡ ವೇಲು ನಾಯ್ಕ ಮುಂತಾದವರೊಂದಿಗೆ ಇರುವ ಚಿತ್ರಗಳು, ಬಿಜೆಪಿ ಮುಖಂಡರೊಬ್ಬರ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ ಪ್ಲೆಕ್ಸ್ ಡಿಸೈನ್‌ಗಳು ಲಭ್ಯವಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ಗೊಂದಲ ಮೂಡಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನ್ನ ಮೇಲೆ ಕೋಮು ಪ್ರಚೋದನೆ ಮೂಡಿಸುವ ಸಲುವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಮುನಿರತ್ನ ದುರುದ್ದೇಶಪೂರ್ವಕವಾಗಿ ಯಾರಬ್ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಪ್ರೇರಣೆ ನೀಡಿ ಆತನಿಂದ ಪಾಕಿಸ್ತಾನದ ಧ್ವಜ ಹೊಂದಿರುವ ಕರಪತ್ರ ಮುದ್ರಿಸಿ ಚುನಾವಣೆಯಲ್ಲಿ ಗಲಭೆ ಮೂಡಿಸುವ ಸಂಚು ರೂಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಅಭ್ಯರ್ಥಿಯಾದ ನನ್ನ ವಿರುದ್ಧ ಅಪಪ್ರಚಾರ ಮಾಡುವ ಹುನ್ನಾರದಿಂದ ಪ್ರಚೋದನಕಾರಿ ಕರಪತ್ರ ಮುದ್ರಿಸಿ ಹಂಚಿರುವ ಯಾರಬ್, ಆತನಿಗೆ ಪ್ರೇರಣೆ ನೀಡಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಮುನಿರತ್ನ ಹಾಗೂ ವೇಲು ನಾಯ್ಕ ಮುಂತಾದ ಬಿಜೆಪಿ ನಾಯಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ದೂರಿನಲ್ಲಿ ತಿಳಿಸಿದ್ದಾರೆ.








