ಅನಿವಾಸಿ ಭಾರತೀಯರಿಗೂ ಮತದಾನಕ್ಕೆ ಅವಕಾಶ ನೀಡಿ: ಚುನಾವಣಾ ಆಯೋಗಕ್ಕೆ ಮನವಿ
'ಸಾಗರೋತ್ತರ ಕನ್ನಡಿಗರು' ವೇದಿಕೆಯಿಂದ ಹೈಕೋರ್ಟ್ ಗೆ ಅರ್ಜಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈ ಹಿನ್ನೆಲೆ ಸಾಗರೋತ್ತರ ಕನ್ನಡಿಗರು ಎಂಬ ಸಂಸ್ಥೆ ಅನಿವಾಸಿ ಕನ್ನಡಿಗರಿಗೆ ಅವರು ಇರುವ ದೇಶದಲ್ಲಿಯೇ ಮತದಾನಕ್ಕೆ ಅವಕಾಶ ಮಾಡಿಕೊಡಿ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದೆ.
ದೇಶದಿಂದ ಹೊರಗೆ ಇರುವ ಭಾರತೀಯರು ಕೂಡ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಮತದಾನ ಮಾಡುವ ಅವಕಾಶ ನೀಡಿದಾಗ ಮಾತ್ರ ಚುನಾವಣೆಗೆ ಅರ್ಥ ಬರುತ್ತದೆ. ಈ ಕುರಿತು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಾಗರೋತ್ತರ ಕನ್ನಡಿಗರು ವೇದಿಕೆ ವತಿಯಿಂದ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಮೇ 2ರಂದು ಬರಲಿದೆ ಎಂದು 'ಸಾಗರೋತ್ತರ ಕನ್ನಡಿಗರು' ವೇದಿಕೆಯ ಸಂಸ್ಥಾಪಕ ರವಿ ಮಹದೇವ ತಿಳಿಸಿದ್ದಾರೆ.
''ಸಾಗರೋತ್ತರ ಕನ್ನಡಿಗರು ಇಂಗ್ಲೆಂಡ್‌ನಲ್ಲಿ ನೋಂದಣಿಯಾದ ಸಂಘವಾಗಿದೆ. ಪ್ರಪಂಚದಾದ್ಯಂತ ನೆಲೆಗೊಂಡಿರುವ ಕನ್ನಡಿಗರ ಧ್ವನಿಯಾಗಿದೆ. ಅಲ್ಲದೆ, ಬಾರಿಯ ಚುನಾವಣೆ ವೇಳೆ ಹೊರ ದೇಶದಲ್ಲಿರುವ ಭಾರತೀಯರಿಗೂ ಮತದಾನಕ್ಕೆ ಅವಕಾಶ ನೀಡಬೇಕೆಂದು ಕೋರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಒಂದು ಅಭಿಯಾನ ಹಮ್ಮಿಕೊಂಡಿದೆ'' ಎಂದು ತಿಳಿಸಿದ್ದಾರೆ.
ಅದೇ ರೀತಿ ಅನಿವಾಸಿ ಭಾರತೀಯರಲ್ಲಿ ಮತದಾನದ ಅವಕಾಶ ವಂಚಿತರೊಂದಿಗೆ ಚರ್ಚಿಸಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರತದ ಪ್ರಜಾಸತ್ತಾತ್ಮಕ ''ನ್ಯಾಯಾಲಯವು ಸಾಧಕ- ಬಾಧಕಗಳನ್ನು ಪರಿಶೀಲಿಸಿ, ಭಾರತೀಯರಿಗೆ ಚಲಾಯಿಸಲು ಹಕ್ಕುಗಳನ್ನು ಮತದಾನದಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡಬಹುದು ಎಂಬ ಬಲವಾದ ನಂಬಿಕೆ ತಮಗಿದೆ. ಅದು ಅಂಚೆ ಮತದಾನದ ಮೂಲಕವಾಗಲಿ ಅಥವಾಸ್ಥಳೀಯ ದೂತಾವಾಸ ಕಚೇರಿಗಳಲ್ಲಿ ಮತದಾನದ ಹಕ್ಕನ್ನು ಚಲಾಯಿಸಲು ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಬಹುದು ಎಂಬ ಆಶಯ ನಮ್ಮದಾಗಿದೆ'' ಎಂದು ರವಿ ಮಹದೇವ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







