ರಾಜ್ಯದಲ್ಲಿ ಮಾರ್ಚ್ ತಿಂಗಳಿನಲ್ಲಿ 79,000 ಮಂದಿಗೆ ಪಾಸ್‌ಪೋರ್ಟ್: ಗರಿಷ್ಠ ಬೆಂಗಳೂರು, 2ನೇ ಸ್ಥಾನದಲ್ಲಿ ಮಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಮಾರ್ಚ್ ತಿಂಗಳಿನಲ್ಲಿ ಗರಿಷ್ಠ 79,027 ಪಾಸ್‌ಪೋರ್ಟ್‌ಗಳನ್ನು ನೀಡಿದೆ. ಇವುಗಳಲ್ಲಿ ನವೀಕರಿಸಿದ ಹಾಗೂ ಹೊಸ ಪಾಸ್‌ಪೋರ್ಟ್‌ಗಳು ಸೇರಿವೆ ಎಂದು timesofindia ವರದಿ ಮಾಡಿದೆ.
ಬೆಂಗಳೂರಿನ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಮೂಲಕ ಗರಿಷ್ಠ ಪಾಸ್‌ಪೋರ್ಟ್‌ಗಳು ನೀಡಲಾಗಿದ್ದರೆ ನಂತರದ ಸ್ಥಾನಗಳು ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ಮೈಸೂರು ನಗರಗಳಿಗೆ ಹೋಗಿವೆ. ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಇಡೀ ರಾಜ್ಯದ ಕಾರ್ಯವ್ಯಾಪ್ತಿಯನ್ನು ಹೊಂದಿದೆ.
ಕೋವಿಡ್ ಸಾಂಕ್ರಾಮಿಕ ಸಂದರ್ಭ ಪಾಸ್‌ಪೋರ್ಟ್ ಅರ್ಜಿಗಳ ಸಂಖೆ ಕಡಿಮೆಯಾಗಿದ್ದರೆ 2022ರ ಆರಂಭದಿಂದ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರಾಸರಿಯಾಗಿ ಬೆಂಗಳೂರಿನ ಲಾಲ್‌ಬಾಗ್ ಪ್ರದೇಶದಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರ ದಿನವೊಂದಕ್ಕೆ 1,700 ಅರ್ಜಿಗಳನ್ನು ಸ್ವೀಕರಿಸುತ್ತಿದ್ದರೆ ಮರಾಠಹಳ್ಳಿಯ ಪಾಸ್‌ಪೋರ್ಟ್ ಸೇವಾ ಕೇಂದ್ರ ಪ್ರತಿದಿನ 850ಕ್ಕೂ ಅಧಿಕ ಅರ್ಜಿಗಳನ್ನು ಪಡೆಯುತ್ತದೆ. ಹೆಚ್ಚಿನ ಅರ್ಜಿಗಳನ್ನು ಅದೇ ದಿನ ಪ್ರಕ್ರಿಯೆಗೊಳಿಸಲಾಗುತ್ತದೆ.
ಮಾರ್ಚ್ 2022 ರಲ್ಲಿ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ನಂತರ ಗರಿಷ್ಠ 55,000 ಪಾಸ್‌ಪೋರ್ಟ್ ಅರ್ಜಿಗಳು ಬಂದಿದ್ದವು. ಪ್ರತಿ ತಿಂಗಳು ಅರ್ಜಿಗಳ ಸಂಖ್ಯೆ ಹೆಚ್ಚಾಗಿ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 1,97,018 ಪಾಸ್‌ಪೋರ್ಟ್‌ಗಳನ್ನು ನೀಡಲಾಗಿದ್ದರೆ ಜನವರಿ-ಮಾರ್ಚ್ ನಡುವೆ 2,14,788 ಪಾಸ್‌ಪೋರ್ಟ್‌ಗಳನ್ನು ನೀಡಲಾಗಿದೆ. ಈ ವರ್ಷ ಕೂಡ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.







