ಚಿತ್ತಾಪುರದಲ್ಲಿ ಈ ಬಾರಿ ಪ್ರಿಯಾಂಕ್ V/S ಮೋದಿ, ಶಾ,ಆದಿತ್ಯನಾಥ್ ನಡುವಿನ ಚುನಾವಣೆ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಈ ಸಲದ ಚುನಾವಣೆ ಕೇವಲ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ಅಭ್ಯರ್ಥಿ ಮಣಿಕಂಠನ ನಡುವಿನ ಚುನಾವಣೆಯಲ್ಲ, ಇದು ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ, ಬೊಮ್ಮಾಯಿ, ಆದಿತ್ಯನಾಥ,ಶಾ, ಮೋದಿ ಮತ್ತು ಆರೆಸ್ಸೆಸ್ ನಡುವೆ ನಡೆಯುವ ಚುನಾವಣೆಯಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಇಂಗಳಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಮಣಿಕಂಠನ ವಿರುದ್ದ ಒಟ್ಟು ನಲವತ್ತು ಕೇಸುಗಳಿವೆ. ಅವುಗಳಲ್ಲಿ ಅಕ್ರಮ ಅಕ್ಕಿ ಹಾಗೂ ಹಾಲಿನ ಪೌಡರ ಸಾಗಾಣಿಕೆ ಮಾಡಿದ ಕೇಸುಗಳಿವೆ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ಮಹಾರಾಷ್ಟ್ರ ದ ಒಟ್ಟು 6 ಜಿಲ್ಲೆಯ ಪೊಲೀಸ್ ಸ್ಟೇಷನ್ ಗಳಲ್ಲಿವೆ. ಆದರೆ ಈ ಕೇಸುಗಳೆಲ್ಲ ನಾನೇ ಹಾಕಿಸಿದ್ದೇನೆ ಎಂದು ಹೇಳುತ್ತಿದ್ದಾನೆ. ನಾನು ಅವನನ್ನು ನೋಡಿರಲೇ ಇಲ್ಲ. ಅವನ ಮೇಲೆ ಕೇಸು ಹಾಕಿದ್ದು ಬಿಜೆಪಿ ಸರ್ಕಾರವೇ ಎಂದು ನೆನಪಿಸಿದರು.
ರಾಮ ರಾಜ್ಯದ ಮಾತನಾಡುವ ಬಿಜೆಪಿಗರು ಚಿತ್ತಾಪುರದಲ್ಲಿ ರಾವಣನಿಗೆ ಟಿಕೆಟ್ ಕೊಟ್ಟಿದ್ದಾರೆ. ಇಂತವನಿಂದ ರಾಮರಾಜ್ಯ ಸ್ಥಾಪನೆ ಸಾಧ್ಯನಾ? ಎಂದರು.
'ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕ 200 ಯೂನಿಟ್ ಉಚಿತ ವಿದ್ಯುತ್, ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ಮನೆಯ ಒಡತಿಗೆ ರೂ 2000 ಸಹಾಯ ಧನ, ಯುವನಿಧಿ ಯೋಜನೆಯಡಿಯಲ್ಲಿ ಸರ್ಕಾರಿ ನೌಕರಿ ಸಿಗುವವರೆಗೆ ಪದವಿಧರರಿಗೆ ಪ್ರತಿ ತಿಂಗಳಿಗೆ 3000 ಡಿಪ್ಲೋಮಾ ಪಡೆದವರಿಗೆ ರೂ 2000 ಕೊಡಲಾಗುವುದು. ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುವುದು. ಅನ್ನಭಾಗ್ಯ ಯೋಜನೆಯಡಿಯಲ್ಲಿ ಹತ್ತು ಕೇಜಿ ಅಕ್ಕಿ ನೀಡಲಾಗುವುದು. ಈ ಯೋಜನೆಗಳ ಗ್ಯಾರೆಂಟಿ ಗೆ ಪತ್ರ ನೀಡಲಾಗುತ್ತಿದೆ. ಇನ್ನೂ ಆರನೆಯ ಗ್ಯಾರೆಂಟಿಯೊಂದನ್ನು ನಾನು ಕೊಡುತ್ತಿದ್ದೇನೆ ಅದೇನಂದರೆ, KKRDB ಯಲ್ಲಿ ಭ್ರಷ್ಟಾ ಚಾರ ಮಾಡಿದವರಿಗೆ ಹಾಗೂ ಅವರಿಗೆ ಸಹಕರಿಸುವವರಿಗೆ ಜೈಲಿಗೆ ಕಳಿಸುತ್ತೇನೆ. ಮಹಿಳೆಯರ ರಕ್ಷಣೆ ಹಾಗೂ ಯುವಕರ ಭವಿಷ್ಯಕ್ಕೆ ಅಡ್ಡಿಯಾಗುವವರನ್ನು ಬೆಳೆಯಲು ಬಿಡುವುದಿಲ್ಲ' ಎಂದರು.
'ಬಿಜೆಪಿ ಅಭ್ಯರ್ಥಿ ದೇವಾಲಯ ಕಟ್ಟಲು ಅಕ್ರಮದ ಹಣ ಕೊಡುತ್ತಾನೆ ಅಂತಹ ಹಣದಿಂದ ದೇವಾಲಯ ಕಟ್ಟಿದರೆ ದೇವರು ಮೆಚ್ಚುತ್ತಾನೆಯೇ?' ಎಂದು ಪ್ರಶ್ನಿಸಿದರು.
.jpeg)







