ಈ ಚುನಾವಣೆ ನಿಮ್ಮ ಬಗ್ಗೆ ಅಲ್ಲ: ತನ್ನನ್ನು 91 ಬಾರಿ ನಿಂದಿಸಲಾಗಿತ್ತು ಎಂದ ಪ್ರಧಾನಿಗೆ ರಾಹುಲ್ ಗಾಂಧಿ ತಿರುಗೇಟು
"ಪ್ರಚಾರಕ್ಕಾಗಿ ಆಗಮಿಸಿ ಕರ್ನಾಟಕದ ಬಗ್ಗೆ ಮಾತನಾಡದೇ ನಿಮ್ಮ ಬಗ್ಗೆ ಹೇಳಿಕೊಳ್ಳುತ್ತೀರಿ"

ತುರುವೇಕೆರೆ: ತಮ್ಮನ್ನು “91 ಬಾರಿ ನಿಂದಿಸಲಾಗಿತ್ತು” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿರುವ ಕುರಿತು ಅವರ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕದ ಚುನಾವಣೆ ಪ್ರಧಾನಿ ಕುರಿತಾದ ಚುನಾವಣೆಯಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
“ನೀವು (ಮೋದಿ) ಕರ್ನಾಟಕ ಚುನಾವಣೆಯ ಪ್ರಚಾರಕ್ಕಾಗಿ ಆಗಮಿಸುತ್ತೀರಿ, ಆದರೆ ಕರ್ನಾಟಕದ ಬಗ್ಗೆ ಮಾತನಾಡುವುದಿಲ್ಲ. ನೀವು ನಿಮ್ಮ ಬಗ್ಗೆ ಹೇಳಿಕೊಳ್ಳುತ್ತೀರಿ. ನೀವು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಏನು ಮಾಡಿದ್ದೀರಿ ಎಂದು ಹೇಳಿ. ಮುಂದಿನ ಐದು ವರ್ಷಗಳಲ್ಲಿ ಏನು ಮಾಡಲಿದ್ದೀರಿ, ಯುವಜನತೆಗೆ, ಶಿಕ್ಷಣಕ್ಕೆ, ಆರೋಗ್ಯ ಕ್ಷೇತ್ರಕ್ಕಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಏನು ಮಾಡುತ್ತೀರಿ ಎಂದು ಹೇಳಿ,” ಎಂದು ರಾಹುಲ್ ಹೇಳಿದ್ದಾರೆ.
ರಾಹುಲ್ ಅವರು ತುಮಕೂರು ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯೊಂದನ್ನುದ್ಧೇಶಿಸಿ ಮಾತನಾಡುತ್ತಿದ್ದರು. “ಈ ಚುನಾವಣೆ ನಿಮ್ಮ ಬಗ್ಗೆ ಅಲ್ಲ, ಇದು ಕರ್ನಾಟಕದ ಜನತೆ ಮತ್ತು ಅವರ ಭವಿಷ್ಯದ ಕುರಿತಾದ ಚುನಾವಣೆ. ಕಾಂಗ್ರೆಸ್ ನಿಮ್ಮನ್ನು 91 ಬಾರಿ ನಿಂದಿಸಿದೆ ಎಂದು ನೀವು ಹೇಳುತ್ತೀರಿ. ಆದರೆ ನೀವು ಕರ್ನಾಟಕಕ್ಕೇನು ಮಾಡಿದೀರಿ ಎಂದು ಹೇಳುವುದಿಲ್ಲ. ಮುಂದಿನ ಭಾಷಣದಲ್ಲಿ ನೀವೇನು ಮಾಡಿದ್ದೀರಿ ಹಾಗೂ ಮುಂದಿನ ಐದು ವರ್ಷ ಏನು ಮಾಡುತ್ತೀರಿ ಎಂದು ತಿಳಿಸಿ,” ಎಂದು ರಾಹುಲ್ ಹೇಳಿದರು.
ತಾನು ಕರ್ನಾಟಕಕ್ಕೆ ಬಂದಾಗ ಇಲ್ಲಿನ ಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ಕಾರ್ಯಗಳ ಬಗ್ಗೆ ಮಾತನಾಡುತ್ತಿರುವುದಾಗಿ ಹೇಳಿದ ರಾಹುಲ್ “ನಾವು ನಮ್ಮ ಎಲ್ಲಾ ನಾಯಕರ ಹೆಸರುಗಳನ್ನೆತ್ತುತ್ತೇವೆ. ನೀವು ಇಲ್ಲಿಗೆ ಬಂದು ನಿಮ್ಮ ಮುಖ್ಯಮಂತ್ರಿ (ಬಸವರಾಜ್ ಬೊಮ್ಮಾಯಿ) ಮತ್ತು ಬಿ ಎಸ್ ಯಡಿಯೂರಪ್ಪ (ಮಾಜಿ ಸೀಎಂ) ಹೆಸರೆತ್ತುವುದಿಲ್ಲ. ನಿಮ್ಮ ಭಾಷಣಗಳ ವಿಚಾರವೆಲ್ಲಾ ನರೇಂದ್ರ ಮೋದಿಯದ್ದಾಗಿದೆ,” ಎಂದು ರಾಹುಲ್ ಹೇಳಿದರು.
“ಒಂದೆರಡು ಬಾರಿ ಬೊಮ್ಮಾಯಿ ಮತ್ತು ಯಡಿಯೂರಪ್ಪ ಹೆಸರನ್ನೂ ಎತ್ತಿ., ಅವರಿಗೆ ಖುಷಿಯಾಗುತ್ತದೆ,” ಎಂದು ರಾಹುಲ್ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಕುರಿತು “ವಿಷಪೂರಿತ ಹಾವು” ಎಂಬ ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿ ಕಾಂಗ್ರೆಸ್ ಅನ್ನು ಗುರಿ ಮಾಡಿದ್ದ ಪ್ರಧಾನಿ, ಕಾಂಗ್ರೆಸ್ ಪಕ್ಷ ಮತ್ತದರ ನಾಯಕರು ತಮ್ಮನ್ನು 91 ಬಾರಿ ನಿಂದಿಸಿದ್ದರು ಎಂದು ಕೆಲ ದಿನಗಳ ಹಿಂದೆ ಆರೋಪಿಸಿದ್ದರು.







