ಶೋಭಾ ಕರಂದ್ಲಾಜೆ-ಯಡಿಯೂರಪ್ಪ ಲೀಲಾ ಪ್ಯಾಲೆಸ್‌ನಲ್ಲಿ ಭೇಟಿಯಾಗಿದ್ದ ಆ ವ್ಯಕ್ತಿ ಯಾರು?: ಎಂ.ಬಿ. ಪಾಟೀಲ್
''ಗಾಳಿಯಲ್ಲಿ ಗುಂಡು ಹೊಡೆಯುವ ಪ್ರಯತ್ನ ನಾನು ಮಾಡಲ್ಲ''

ಬೆಂಗಳೂರು, ಮೇ.1: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೊಸದಿಲ್ಲಿಯ ಲೀಲಾ ಪ್ಯಾಲೇಸ್ ನಲ್ಲಿ ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದರು. ಆ ಭೇಟಿಯ ಹಿನ್ನೆಲೆ ಏನು? ಭೇಟಿಯಾದ ವ್ಯಕ್ತಿ ಯಾರು ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸುವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಇದನ್ನು ವಿಸ್ತಾರವಾಗಿ ಬಹಿರಂಗಪಡಿಸುತ್ತೇನೆ. ಗಾಳಿಯಲ್ಲಿ ಗುಂಡು ಹೊಡೆಯುವ ಪ್ರಯತ್ನ ನಾನು ಮಾಡಲ್ಲ. ಕುತೂಹಲಕ್ಕಾಗಿ ನೀವು ಕಾಯಿರಿ. ಇನ್ನು ಮೇ7ರೊಳಗಡೆ ನಾನು ಇದನ್ನು ಬಹಿರಂಗಪಡಿಸುತ್ತೇನೆ’ ಎಂದು ತಿಳಿಸಿದರು.
ದೇಶದ ಸ್ವಾತಂತ್ರ್ಯಹೋರಾಟದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಅವರು ಪಾಲ್ಗೊಂಡಿಲ್ಲ. ಇಂದು ಅವರು ಬಂದು ನಮಗೆ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಪಾಠ ಮಾಡುತ್ತ ಇದ್ದಾರೆ. ದೇಶದಲ್ಲಿ ನೂರಾರು ಆಣೆಕಟ್ಟುಗಳಾಗಿದ್ದು, ಐಐಟಿ, ಮತ್ತು ಐಐಎಂ ಸೇರಿದಂತೆ ದೇಶದಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಹಸಿರು ಕ್ರಾಂತ್ರಿ, ಶ್ವೇತ ಕ್ರಾಂತಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಪ್ರತಿ ಗ್ರಾಮದಲ್ಲಿ ಶಾಲೆ, ಆಸ್ಪತ್ರೆ ಆಗಿದ್ದು ಕಾಂಗ್ರೆಸ್ ಅವಧಿಯಲ್ಲಿ ಎಂದರು.
ಪ್ರಣಾಳಿಕೆ ಎಂಬುದು ಭಗವದ್ಗೀತೆ ಎಂದು ಪ್ರಧಾನಿ ಮೋದಿ ಹೇಳ್ತಾರೆ, ಆದರೆ ಎಲ್ಲಿ ಹೋಯಿತು ಮೋದಿಯ ಕಪ್ಪುಹಣದ ಭರವಸೆ ಮತ್ತು ವರ್ಷಕ್ಕೆ 2 ಕೋಟಿಯ ಉದ್ಯೋಗದ ಭರವಸೆ. ನೋಟು ಅಮಾನ್ಯಕೀರಣ ಮಾಡಿ ಆರ್ಥಿಕತೆ ವ್ಯವಸ್ಥೆ ಬುಡಬೇಲು ಮಾಡಿದ್ದಾರೆ.
ರೈತರ ಆದಾಯ ದ್ವಿಗುಣ ಮಾಡುತ್ತೇವೆಂದ ಬೆಜೆಪಿ ಅವರು ರೈತರ ಖರ್ಚು ಹೆಚ್ಚಳವಾಗಿಲ್ಲ. ಬೆಲೆಯೇರಿಕೆ ಗಗನಕ್ಕೇರಿದೆ. ಇಂದು ಅಗತ್ಯ ವಸ್ತುಗಳ ಬೆಲೆಯ ಏರಿಕೆ ಮತ್ತು ನಿರುದ್ಯೋಗ ಹೆಚ್ಚಳವಾಗಿದೆ, ಇದು ಪ್ರಧಾನಿ ನರೇಂದ್ರ ಮೋದಿಯ ಅಚ್ಚೇದಿನದ ಕೊಡುಗೆ ಎಂದು ಅವರು ಹೇಳಿದರು.







