ಮೇ 3ರಂದು ಮುಲ್ಕಿಯಲ್ಲಿ ಪ್ರಧಾನಿ ಮೋದಿಯ ಸಮಾವೇಶ: ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್

ಮಂಗಳೂರು, ಮೇ 1: ಪ್ರಧಾನಿ ನರೇಂದ್ರ ಮೋದಿ ಮೇ3ರಂದು ದ.ಕ.ಜಿಲ್ಲೆಗೆ ಭೇಟಿ ನೀಡಲಿದ್ದು, ಮುಲ್ಕಿಯ ಬಳಿ ಸಜ್ಜುಗೊಳಿಸಲಾದ ವಿಶಾಲ ಮೈದಾನದಲ್ಲಿ ಸಮಾವೇಶಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಹೇಳಿದರು.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರತಿ ಬೂತ್ ಮಟ್ಟದಲ್ಲಿ ಪೂರ್ವಭಾವಿ ಸಭೆಗಳು ನಡೆಸಲಾಗಿದೆ. ದ.ಕ ಮತ್ತು ಉಡುಪಿ ಜಿಲ್ಲೆಗಳ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎರಡೂ ಜಿಲ್ಲೆಗಳ ಮಧ್ಯ ಭಾಗವಾದ ಮುಲ್ಕಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ವೇದಿಕೆ ಮತ್ತು ಪೆಂಡಾಲ್ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶ ಒದಗಿಸಲಾಗಿದೆ. ಮಂಗಳವಾರ ಮಧ್ಯಾಹ್ನದೊಳಗೆ ಎಲ್ಲ ಕೆಲಸ ಪೂರ್ಣಗೊಂಡ ಬಳಿಕ ಕಾರ್ಯಕ್ರಮ ನಡೆಸುವ ಸ್ಥಳವನ್ನು ಭದ್ರತಾ ಸಿಬ್ಬಂದಿಗಳಿಗೆ ಬಿಟ್ಟು ಕೊಡಲಾಗುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದರು.
*ಹೊಸದಿಲ್ಲಿಯಿಂದ ನೇರವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಬಜ್ಪೆಯಿಂದ ಹೆಲಿಕಾಪ್ಟರ್ ಮೂಲಕ ಸಮಾವೇಶದ ಸ್ಥಳಕ್ಕೆ ಆಗಮಿಸುತ್ತಾರೆ. ಹೆಲಿಕಾಪ್ಟರ್ ಇಳಿಯಲು ಪಣಂಬೂರಿನ ಎನ್‌ಎಂಪಿಎ, ಸುರತ್ಕಲ್‌ನ ಎನ್‌ಐಟಿಕೆ, ಮುಲ್ಕಿಯ ಸಮಾವೇಶದ ಸ್ಥಳದ ಪಕ್ಕದಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.
*ಭದ್ರತಾ ಕಾರಣಗಳಿಂದಾಗಿ ಪ್ರಧಾನಿ ಆಗಮಿಸುವ ಹೊತ್ತಿಗೆ ಸಮಾವೇಶದ ಪರಿಸರದಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗುತ್ತದೆ. ಪ್ರಧಾನಿಯ ಸಾರ್ವಜನಿಕ ಸಭೆಯು ಬೆಳಗ್ಗೆ 10ಕ್ಕೆ ನಿಗದಿಯಾಗಿದೆ. ಕಾರ್ಯಕರ್ತರು, ಸಾರ್ವಜನಿಕರು ಬೆಳಗ್ಗೆ 9 ಗಂಟೆಯೊಳಗೆ ಸಮಾವೇಶದ ಸ್ಥಳಕ್ಕೆ ಆಗಮಿಸಬೇಕು.
*ಸಮಾವೇಶದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳಿಂದ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದ್ದು, ಎರಡೂ ಜಿಲ್ಲೆಗಳ ಒಟ್ಟು 13 ಕ್ಷೇತ್ರಗಳ ಅಭ್ಯರ್ಥಿಗಳೂ ಹಾಜರಿರುತ್ತಾರೆ.
*ಪ್ರಧಾನಿ ನರೇಂದ್ರ ಮೋದಿಗೆ ಕರಾವಳಿಯ ತಿಂಡಿ ತಿನಿಸುಗಳಾದ ಉಪ್ಪಿಟ್ಟು ಅವಲಕ್ಕಿ, ಮೂಡೆ, ನೀರ್‌ದೋಸೆ ಮುಂತಾದ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಪಕ್ಷದ ಮುಖಂಡ ಸಂಜಯ್ ಪ್ರಭು ಉಪಸ್ಥಿತರಿದ್ದರು.







