ಕಾರ್ಮಿಕರು ಸವಾಲುಗಳನ್ನು ಎದುರಿಸಬೇಕು: ಎಚ್.ವಿ. ರಾವ್

ಮಂಗಳೂರು: ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದ ಪರಿಣಾಮವಾಗಿ ಇಂದು ಕಾರ್ಮಿಕ ವರ್ಗ ತಾನು ಗಳಿಸಿದ ಹಕ್ಕುಗಳನ್ನು ಕಳೆದುಕೊಳ್ಳುವಂತಾಗಿದೆ. ಆಡಳಿತಗಾರರು ಬಂಡವಾಳಿಗರ ಪರವಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿದ್ದಾರೆ. ಈ ಸಂದರ್ಭ ಕಾರ್ಮಿಕರು ಎಲ್ಲಾ ಸವಾಲು ಗಳನ್ನು ಎದುರಿಸಲು ಸಜ್ಜಾಗಬೇಕು ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಕಾಮ್ರೇಡ್ ಹೆಚ್. ರಾವ್ ಹೇಳಿದರು.
ನಗರದ ಎಐಟಿಯುಸಿ ಕಚೇರಿಯಲ್ಲಿ ಇಂದು ನಡೆದ ವಿಶ್ವ ಕಾರ್ಮಿಕ ದಿನಾಚರ ಕಾರ್ಯಕ್ರಮದಲ್ಲಿ ಕೆಂಬಾವುಟ ಆರೋಹಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ಬಿಜೆಪಿ ಸರಕಾರವು ಎಂಟು ಗಂಟೆಗಳ ದುಡಿಯುವ ಅವಧಿಯನ್ನು 12 ಗಂಟೆಗೆ ಏರಿಸಿದೆ. ಮಹಿಳಾ ಕಾರ್ಮಿಕರಿಗೂ ಇದನ್ನು ಅನ್ವಯಪಡಿಸಿದೆ. ಕಾರ್ಮಿಕ ವರ್ಗವು ಸರಕಾರಗಳ ಇಂತಹ ಧೋರಣೆಗಳನ್ನು ವಿರೋಧಿಸಿ ಐತಿಹಾಸಿಕವಾಗಿ ಗಳಿಸಿದ ಹಕ್ಕುಗಳನ್ನು ಉಳಿಸಿಕೊಳ್ಳಬೇಕು. ಆಡಳಿತಗಾರರ ಇಂತಹ ಕಾರ್ಮಿಕ ವಿರೋಧಿ ನೀತಿಗಳನ್ನು ಸವಾಲಾಗಿ ಸ್ವೀಕರಿಸಿ ಸಂಘಟನಾತ್ಮಕವಾದ ಹೋರಾಟಗಳನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಮಾಜಿ ಕಾರ್ಯದರ್ಶಿ ವಿ.ಕುಕ್ಯಾನ್, ಎಐವೈಎಫ್ ಮಂಗಳೂರು ತಾಲೂಕು ಅಧ್ಯಕ್ಷ ಪುಷ್ಪರಾಜ್ ಬೋಳೂರು, ಎಐಟಿಯುಸಿ ನಾಯಕರಾದ ತಿಮ್ಮಪ್ಪಕಾವೂರು, ಸುಲೋಚನ ಕವತ್ತಾರು, ಶರ್ಮಿಳಾ ಕರುಣಾಕರ್, ಆಶಿಕಾ, ಸುಧಾಕರ್ ಉರ್ವ ಉಪಸ್ಥಿತರಿದ್ದರು.
ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಬೇರಿಂಜ ಸ್ವಾಗತಿಸಿದರು. ಸಿಪಿಐ ಮಂಗಳೂರು ತಾಲೂಕು ಕಾರ್ಯದರ್ಶಿ ಎಂ. ಕರುಣಾಕರ್ ವಂದಿಸಿದರು.







