ಪ್ರಚೋದನಕಾರಿ ಭಾಷಣ ಆರೋಪ: ಸಂಸದೆ ಸುಮಲತಾ ಆಪ್ತ, ಶ್ರೀರಂಗಪಟ್ಟಣ ಬಿಜೆಪಿ ಅಭ್ಯರ್ಥಿ ವಿರುದ್ಧ ಎಫ್‌ಐಆರ್

ಮಂಡ್ಯ, ಮೇ 1: ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದೆ ಸುಮಲತಾ ಆಪ್ತ ಎಸ್.ಸಚ್ಚಿದಾನಂದ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಚುನಾವಣಾ ಕಾರ್ಯಕ್ಕೆ ನಿಯೋಜನೆಯಾಗಿರುವ ವಿಶೇಷ ಜಾಗೃತ ದಳದ ಅಧಿಕಾರಿ ರವೀಂದ್ರ ಅವರು ನೀಡಿದ ದೂರಿನನ್ವಯ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 505(2) ಅಡಿ ಪ್ರಕರಣ ದಾಖಲಾಗಿದೆ.
ಎ.29 ರಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕು ಕೊತ್ತತ್ತಿ ಗ್ರಾಮದಲ್ಲಿ ನಡೆದ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಅಭ್ಯರ್ಥಿ ಸಚ್ಚಿದಾನಂದ ಮಾತನಾಡಿ, ಶ್ರೀರಂಗಪಟ್ಟಣದ ಐತಿಹಾಸಿಕ ಜಾಮಿಯಾ ಮಸೀದಿ ಜಾಗದಲ್ಲಿ ಮೂಲ ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಿಸಲಾಗುವುದು ಎಂದು ಹೇಳಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಮಾವೇಶದಲ್ಲಿ ಉಪಸ್ಥಿತರಿದ್ದ ಕೇಂದ್ರ ಸಚಿವ ರಾಜಾನಾಥ್‌ಸಿಂಗ್ ಸಮ್ಮುಖದಲ್ಲಿ ಮಾತನಾಡಿದ ಸಚ್ಚಿದಾನಂದ, “ಶ್ರೀರಂಗಪಟ್ಟಣದ ಮೂಡಲಪಾಯ ಆಂಜನೇಯಸ್ವಾಮಿ ದೇವಾಲಯದ ಮೂರ್ತಿಯನ್ನು ಕಿತ್ತು ಹೊಳೆಗೆ ಎಸೆದು ಅಲ್ಲಿ ಅದನ್ನು ಮಸೀದಿಯಾಗಿ ಪರಿವರ್ತನೆ ಮಾಡಲಾಗಿದೆ. ಮಸೀದಿ ಜಾಗದಲ್ಲಿ ಮತ್ತೆ ಮೂಡಲ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆಗೆ ನಿಮ್ಮೆಲ್ಲರೂ(ಮತದಾರರ) ಆಶೀರ್ವಾದ ಮಾಡಬೇಕು” ಎಂದು ಪ್ರಚೋದನಾತ್ಮಕ ಭಾಷಣ ಮಾಡಿದ್ದರು.





