ವಿರೋಧ ಪಕ್ಷದ ಸ್ಥಾನದಲ್ಲೂ ಕೂರಲು ಬಿಜೆಪಿ ನಾಲಾಯಕ್ಕು: ಜಿ.ಎನ್. ನಾಗರಾಜ್
ಮಂಗಳೂರಿನಲ್ಲಿ ಮೇ ದಿನಾಚರಣೆ

ಮಂಗಳೂರು: ರಾಜ್ಯದ ಜನತೆ ನೀಡಿದ ಜನಾದೇಶಕ್ಕೆ ವಿರುದ್ಧವಾಗಿ ಅಕ್ರಮ ಸರಕಾರ ರಚಿಸಿ ಜನತೆಯ ಬದು ಕನ್ನು ಮೂರಾಬಟ್ಟೆಯನ್ನಾಗಿಸಿ ರಾಜ್ಯದ ಖಜಾನೆಯನ್ನು ಲೂಟಿ ಮಾಡಿ ಶೇ.40 ಕಮಿಷನ್ ಸರಕಾರವೆಂದು ತನ್ನವರಿಂದಲೇ ಕರೆಸಿಕೊಂಡ ಬಿಜೆಪಿಯು ವಿಪಕ್ಷ ಸ್ಥಾನದಲ್ಲೂ ಕೂರಲು ನಾಲಾಯಕ್ಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸ್ಥಾಪಕಾಧ್ಯಕ್ಷ ಜಿ.ಎನ್. ನಾಗರಾಜ್ ಹೇಳಿದರು.
ಕಾರ್ಮಿಕ ವರ್ಗವನ್ನು ನಿರ್ಲಕ್ಷಿಸುವ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಪ್ರಬಲ ಚಳುವಳಿ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ‘ಮೇ ದಿನಾಚರಣೆ’ಯನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ರಚಿಸಲಾದ ‘ಮೇ ದಿನ ಆಚರಣಾ ಸಮಿತಿ’ಯ ಆಶ್ರಯದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ನಗರದಲ್ಲಿ ಇಂದು ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಂಬಾನಿ, ಅಧಾನಿಗಳ ಸಂಪತ್ತನ್ನು ವೃದ್ಧಿಸಲು ಪೆಟ್ರೋಲ್, ಡಿಸೇಲ್ ಅಡುಗೆ ಅನಿಲ ಸಹಿತ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ಆಗುತ್ತಿದೆಯೇ ಹೊರತು ಜನಸಾಮಾನ್ಯರ ಬದುಕನ್ನು ರಕ್ಷಿಸಲು ಅಲ್ಲ. ಜನ ಸಾಮಾನ್ಯರಿಂದ ವಿಪರೀತ ತೆರಿಗೆ ಸಂಗ್ರಹಿಸುವ ಮೋದಿ ಸರಕಾರ ಶ್ರೀಮಂತ ಉದ್ಯಮಿಗಳಿಗೆ, ಕಾರ್ಪೊರೇಟ್ ಕಂಪೆನಿಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿದೆ. ಇಂತಹ ಫ್ಯಾಸಿಸ್ಟ್ ಜನವಿರೋಧಿ ಸರಕಾರ ಮತ್ತೆ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೇರಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹಾಗಾಗಿ ಇವರನ್ನು ಕಿತ್ತೆಸೆಯಲು ಕಾರ್ಮಿಕ ವರ್ಗ ಒಂದಾಗಿ ನಿಲ್ಲಬೇಕೆಂದು ಜಿ.ಎನ್.ನಾಗರಾಜ್ ಕರೆ ನೀಡಿದರು.
ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಬ್ಯಾಂಕ್ ನೌಕರರ ರಾಜ್ಯ ನಾಯಕರಾದ ನಾಗರಾಜ್ ಶ್ಯಾನಭಾಗ್ ಮಾತನಾಡಿದರು.
ಮೇ ದಿನ ಆಚರಣಾ ಸಮಿತಿಯ ಗೌರವಾಧ್ಯಕ್ಷ ಡಾ.ಕೃಷ್ಣಪ್ಪಕೊಂಚಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಿಐಟಿಯು ಮುಖಂಡರಾದ ಯು.ಬಿ. ಲೋಕಯ್ಯ, ರಮಣಿ ಮೂಡುಬಿದಿರೆ, ಪದ್ಮಾವತಿ ಶೆಟ್ಟಿ, ಗಿರಿಜಾ, ನೋಣಯ್ಯ ಗೌಡ, ಸುಕುಮಾರ್, ಜನವಾದಿ ಮಹಿಳಾ ಸಂಘಟನೆಯ ನಾಯಕಿ ಜಯಂತಿ ಶೆಟ್ಟಿ, ಡಿವೈಎಫ್‌ಐ ನಾಯಕ ಸಂತೋಷ್ ಬಜಾಲ್, ಎಸ್‌ಎಫ್‌ಐ ಮುಖಂಡ ವಿನೀತ್ ದೇವಾಡಿಗ, ವಕೀಲರ ಸಂಘಟನೆಯ ಮುಖಂಡರಾದ ಯಶವಂತ ಮರೋಳಿ, ನಿತಿನ್ ಕುತ್ತಾರ್, ದಲಿತ ಸಂಘಟನೆಯ ಹಿರಿಯ ಮುಖಂಡ ಎಂ ದೇವದಾಸ್, ಬೀದಿಬದಿ ವ್ಯಾಪಾರಸ್ಥರ ಸಂಘದ ನಾಯಕ ಮುಹಮ್ಮದ್ ಮುಸ್ತಫಾ, ಬಂದರು ಶ್ರಮಿಕ ಸಂಘದ ನಾಯಕ ವಿಲ್ಲಿ ವಿಲ್ಸನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ರೊಯ್ ಕ್ಯಾಸ್ಟಲಿನೋ, ಎರಿಕ್ ಲೋಬೋ, ಪದ್ಮನಾಭ ಕೋಟ್ಯಾನ್, ಗಂಗಯ್ಯ ಅಮೀನ್, ವಸಂತಿ ಕುಪ್ಪೆಪದವು, ಸದಾಶಿವ ದಾಸ್, ಭಾರತಿ ಬೋಳಾರ, ಸುಂದರ ಕುಂಪಲ, ರೋಹಿದಾಸ್ ತೊಕ್ಕೊಟ್ಟು, ರಘು ಎಕ್ಕಾರು, ವಾಸುದೇವ ಉಚ್ಚಿಲ್ ಭಾಗವಹಿಸಿದ್ದರು.
ಸಂಘಟನೆಗಳ ಮುಖಂಡರಾದ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು. ರಾಧಾ ಮೂಡುಬಿದಿರೆ ವಂದಿಸಿದರು. ಬಿ.ಕೆ. ಇಮ್ತಿಯಾಝ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ನೆಹರೂ ಮೈದಾನ ಸಮೀಪದ ಬಸ್ ನಿಲ್ದಾಣದ ಬಳಿಯಿಂದ ಡಾನ್‌ಬಾಸ್ಕೋ ಹಾಲ್‌ವರೆಗೆ ಕಾರ್ಮಿಕರು ಮೆರವಣಿಗೆ ನಡೆಸಿದರು.








