ಬಿಜೆಪಿ ಪ್ರಣಾಳಿಕೆ ಕಿವಿ ಮೇಲೆ ಮತ್ತೆ ಹೂ ಎನ್ನುವಂತಿದೆ: ಸಿದ್ದರಾಮಯ್ಯ ಟೀಕೆ
''ಈ ಪ್ರಣಾಳಿಕೆಯನ್ನು ಜನರೇ ಅನುಷ್ಠಾನಕ್ಕೆ ತರಬೇಕೇ ಹೊರತು ಸರ್ಕಾರ ಅಲ್ಲ''
ಬೆಂಗಳೂರು: ಬಿಜೆಪಿ ‘’ಜನತಾ ಪ್ರಣಾಳಿಕೆ’’ ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ. ಈ ಪ್ರಣಾಳಿಕೆಯನ್ನು ಜನತೆಯೇ ಅನುಷ್ಠಾನಕ್ಕೆ ತರಬೇಕೇ ಹೊರತು ಸರ್ಕಾರ ಅಲ್ಲ ಎನ್ನುವದೇ ಇದರ ಅರ್ಥವಾಗಿದೆ ಎಂದು ಟೀಕಿಸಿದರು.
ಸೋಮವಾರ ಈ ಕುರಿತು ಪ್ರತಿಕ್ರಿಯಿಸಿದ ಅವರು, 'ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅನ್ನ, ಅಭಯ, ಅಕ್ಷರ, ಅಭಿವೃದ್ದಿ ಮತ್ತು ಆದಾಯಗಳ ಭರವಸೆಗಳನ್ನು ನೀಡಿದೆ. ಕಳೆದ ಮೂರುವರೆ ವರ್ಷಗಳ ಅವಧಿಯ ರಾಜ್ಯದ ಬಿಜೆಪಿ ಸರ್ಕಾರ ಈ ಐದು ಭರವಸೆಗಳನ್ನು ಜನರಿಂದ ಕಸಿದುಕೊಂಡಿದೆ' ಎಂದು ಕಿಡಿಕಾರಿದ್ದಾರೆ.
'ಪಡಿತರ ಚೀಟಿ ಮೂಲಕ ನೀಡಲಾಗುತ್ತಿದ್ದ 7 ಕಿಲೋ ಅಕ್ಕಿಯನ್ನು ಐದು ಕಿಲೋಗಳಿಗೆ ಇಳಿಸಿ ಅನ್ನವನ್ನು ಕಸಿದುಕೊಂಡಿದೆ.
ರಾಜ್ಯದಲ್ಲಿ 10.12 ಲಕ್ಷ ಮಕ್ಕಳು ಶಾಲೆಯನ್ನು ತೊರೆಯುವಂತೆ ಮಾಡುವ ಮೂಲಕ ಅಕ್ಷರವನ್ನು ಕಸಿದುಕೊಂಡಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಕೊರೋನ ರೋಗ ನಿರ್ವಹಣೆಯಲ್ಲಿನ ನಿರ್ಲಕ್ಷ ಮತ್ತು ಭ್ರಷ್ಟಾಚಾರದಿಂದಾಗಿ ಜನತೆಯ ಆರೋಗ್ಯವನ್ನು ಕಸಿದುಕೊಂಡಿದೆ.
ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ 40% ಕಮಿಷನ್ ಹಾವಳಿಯ ಮೂಲಕ ಅಭಿವೃದ್ದಿಯನ್ನು ಕಸಿದುಕೊಂಡಿದೆ' ಎಂದು ಅವರು ವಾಗ್ದಾಳಿ ನಡೆಸಿದರು.
'ರಾಜ್ಯದ ಗೃಹಸಚಿವರ ಅದಕ್ಷತೆ ಮತ್ತು ಭ್ರಷ್ಟತೆಯಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದು ಮಾತ್ರವಲ್ಲ ರೌಡಿ-ಗೂಂಡಾಗಳೆಲ್ಲ ಮುಕ್ತವಾಗಿ ಓಡಾಡಲು ಸ್ವಾತಂತ್ರ್ಯ ಪಡೆದಿರುವ ಕಾರಣ ಜನತೆಯ ಭದ್ರತೆಯ ಅಭಯವನ್ನೂ ಕಸಿದುಕೊಂಡಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ರೂ.410 ರಿಂದ ರೂ.1105ಕ್ಕೆ ಏರಿಸಿರುವ ಮತ್ತು ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ರದ್ದುಪಡಿಸಿರುವ ಬಿಜೆಪಿ ಈಗ ಅಡುಗೆ ಅನಿಲದ ಮೂರು ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡುವ ಮೂಲಕ ರಾಜ್ಯದ ಜನರ ಕಿವಿಗೆ ಹೂ ಇಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ, ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವಧಿಯಲ್ಲಿ ರಾಜ್ಯದಾದ್ಯಂತ ಪ್ರಾರಂಭಿಸಿದ್ದ 600 ಇಂದಿರಾ ಕ್ಯಾಂಟೀನ್ ಗಳನ್ನು ರಾಜಕೀಯ ದ್ವೇಷಾಸೂಯೆಯಿಂದ ಮುಚ್ಚಿರುವ ಬಿಜೆಪಿ ಈಗ ಅಟಲ್ ಆಹಾರ ಕೇಂದ್ರಗಳನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿರುವುದೇ ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದಾರೆ.
ಪಡಿತರ ಚೀಟಿಗಳಮೂಲಕ ನೀಡಲಾಗುತ್ತಿದ್ದ ಏಳು ಕಿಲೋ ಉಚಿತ ಅಕ್ಕಿಯನ್ನು ಐದು ಕಿಲೋಗಳಿಗೆ ಇಳಿಸಿದ್ದ ಬಿಜೆಪಿ ಐದು ಕಿಲೋ ಸಿರಿಧಾನ್ಯ ಕೊಡುತ್ತೇವೆ ಎಂದು ಹೇಳಿರುವುದು ಇನ್ನೊಂದು ವಿಪರ್ಯಾಸ ಎಂದಿದ್ದಾರೆ.
ಹತ್ತು ಲಕ್ಷ ನಿವೇಶನಗಳನ್ನು ವಿತರಿಸುವ ಭರವಸೆ ನೀಡಿರುವ ಇದೇ ಬಿಜೆಪಿ ಕಳೆದ ಮೂರುವರೆ ವರ್ಷಗಳ ಅವಧಿಯಲ್ಲಿ ಒಂದೇ ಒಂದು ಹೊಸಮನೆಯನ್ನು ನಿರ್ಮಾಣ ಮಾಡಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವಧಿಯ ಐದು ವರ್ಷಗಳಲ್ಲಿ ಹದಿನೈದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು. ಬಿಜೆಪಿ ಸರ್ಕಾರ ನಿರ್ಮಾಣ ಹಂತದಲ್ಲಿದ್ದ ನಮ್ಮ ಕಾಲದ ಮನೆಗಳನ್ನುಪೂರ್ಣಗೊಳಿಸಿ ಅದನ್ನೇ ಸಾಧನೆ ಎಂದು ಹೇಳಿಕೊಳ್ಳುತ್ತಿದೆ. ಸಣ್ಣ ಕೈಗಾರಿಕೆಗಳು ಮತ್ತು ಐಟಿಐಗಳ ನಡುವೆ ಒಪ್ಪಂದ ಮಾಡಿಕೊಂಡು ಯುವ ಪ್ರತಿಭೆಗಳಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶ ಕಲ್ಪಿಸುವ ‘ಸಮನ್ವಯ' ಯೋಜನೆಯ ಭರವಸೆಯನ್ನು ಬಿಜೆಪಿ ನೀಡಿದೆ ಎಂದು ಸಿದ್ದರಾಮಯ್ಯ ನುಡಿದರು.