ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ 47 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆ್ಯಪ್
ಹೊಸದಿಲ್ಲಿ: ವಾಟ್ಸ್ ಆ್ಯಪ್ ಮೇ ತಿಂಗಳ 'ಮಾಸಿಕ ಭಾರತದ ವರದಿ'ಯನ್ನು ಬಿಡುಗಡೆ ಮಾಡಿದ್ದು, ಈ ವರದಿಯ ಪ್ರಕಾರ, ಮೆಟಾ ಮಾಲಕತ್ವದ ಕ್ಷಿಪ್ರ ಸಂದೇಶ ಸಂಸ್ಥೆಯಾದ ವಾಟ್ಸ್ ಆ್ಯಪ್, ಭಾರತದಲ್ಲಿ ಮಾರ್ಚ್ ತಿಂಗಳಾಂತ್ಯಕ್ಕೆ 47 ಲಕ್ಷ ದುರುದ್ದೇಶಪೂರಿತ ವಾಟ್ಸ್ ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಪ್ರತಿಪಾದಿಸಿದೆ ಎಂದು timesofindia.com ವರದಿ ಮಾಡಿದೆ.
ಈ ನಿಷೇಧಿತ 4,715,906 ಖಾತೆಗಳ ಪೈಕಿ ಮಾರ್ಚ್ 1, 2023ರಿಂದ ಮಾರ್ಚ್ 31, 2023ರ ನಡುವೆ ಬಳಕೆದಾರರಿಂದ ಯಾವುದೇ ವರದಿ ಬರುವುದಕ್ಕಿಂತ ಮುಂಚಿತವಾಗಿಯೇ 1,659,385 ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸ್ ಆ್ಯಪ್ ಹೇಳಿದೆ.
ಭಾರತೀಯ ಖಾತೆಗಳನ್ನು +91 ಸಂಕೇತ ಸಂಖ್ಯೆಯೊಂದಿಗೆ ಗುರುತಿಸಲಾಗುತ್ತದೆ.
ಮಾಹಿತಿ ತಂತ್ರಜ್ಞಾನ ನಿಯಮಾವಳಿಗಳು, 2021ರ ಅನ್ವಯ ವಾಟ್ಸ್ ಆ್ಯಪ್ ಮಾಸಿಕ ವರದಿಯನ್ನು ಬಿಡುಗಡೆ ಮಾಡುತ್ತಿದೆ. ಈ ಬಳಕೆದಾರರ ಭದ್ರತೆಯ ವರದಿಯು ಬಳಕೆದಾರರಿಂದ ಸ್ವೀಕರಿಸಿರುವ ದೂರುಗಳ ವಿವರ ಹಾಗೂ ಅದಕ್ಕೆ ಪ್ರತಿಯಾಗಿ ವಾಟ್ಸ್ ಆ್ಯಪ್ ಕೈಗೊಂಡಿರುವ ಕ್ರಮಗಳನ್ನು ಒಳಗೊಂಡಿರುತ್ತದೆ.
ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ 4,720 ವರದಿಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 585 ವರದಿಗಳ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ವಾಟ್ಸ್ ಆ್ಯಪ್ ಹೇಳಿಕೊಂಡಿದೆ.