ಕಾರ್ಪೋರೇಟ್-ಕೋಮುವಾದ ಮೈತ್ರಿ ಸೋಲಿಸಿ: ಸುರೇಶ್ ಕಲ್ಲಾಗರ

ಕುಂದಾಪುರ, ಮೇ 1: ಮೇ ದಿನದ ಪ್ರಾಣ ತ್ಯಾಗದ ಐತಿಹಾಸಿಕ ಹೋರಾಟ ದಿಂದ ಗಳಿಸಿದ ಎಂಟು ಗಂಟೆ ಕೆಲಸದ ಅವಧಿಯನ್ನು 12 ಗಂಟೆಗೆ ಏರಿಸಿದ ಹಾಗೂ ದೇಶದ ಸಮಗ್ರತೆ ಐಕ್ಯತೆಗೆ ಬೆದರಿಕೆಯಾಗಿರುವ ಕಾರ್ಪೋರೇಟ್ -ಕೋಮುವಾದದ ಅಪವಿತ್ರ ಮೈತ್ರಿ ಸರಕಾರವನ್ನು ಕಾರ್ಮಿಕ ವರ್ಗ ಸೋಲಿಸ ಬೇಕಾಗಿದೆ ಎಂದು ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಇಂದು ನಡೆದ 139ನೇ ಮೇ ದಿನಾಚರಣೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಂಪತ್ತು ಸೃಷ್ಠಿಸುವ ಕಾರ್ಮಿಕರು ಹಾಗೂ ಅನ್ನ ಕೊಡುವ ರೈತರ ಬೇಡಿಕೆ ಗಳನ್ನು ಆಡಳಿತ ನಡೆಸುವ ಸರಕಾರ ನಿರಂತರವಾಗಿ ಕಡೆಗಣಿಸುತ್ತಿದೆ. ಕಾರ್ಮಿಕರ ನೂತನ ಸಂಹಿತೆ ಹಾಗೂ ಕರ್ನಾಟಕದಲ್ಲಿ ನೂತನ ಕೃಷಿ ಕಾಯ್ದೆ ಜಾರಿಯು ಅಪಾಯಕಾರಿಯಾಗಿದೆ ಎಂದು ಅವರು ಆರೋಪಿಸಿದರು.
ಪಿಎಸ್‌ಐ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ, ಲೋಕೋಪ ಯೋಗಿ ಟೆಂಡರ್ ಹಗರಣ, ಸಿಡಿ ಹಗರಣ, ಭೂಕಬಳಿಕೆ, ಗೋ ಶಾಲೆಗಳಿಗೆ ಮೇವು ಹಗರಣ, ಕೋವಿಡ್ ಬೆಡ್, ಆಕ್ಸಿಜನ್ ಹಗರಣ, ಕಟ್ಟಡ ಕಾರ್ಮಿಕರ ಕಿಟ್ ಹಗರಣ, ಮೊಟ್ಟೆ ಹಗರಣ, ಬಿಟ್ ಕಾಯಿನ್ ಹಗರಣ,ಬಿಡಿಎ ಹಗರಣಗಳು ರಾಜ್ಯದ ಗೌರವ ಕಡಿಮೆ ಮಾಡಿದೆ ಎಂದು ಅವರು ಟೀಕಿಸಿದರು.
ಸಿಐಟಿಯು ಮುಖಂಡ ಎಚ್.ನರಸಿಂಹ ಮಾತನಾಡಿ, ಬೆಲೆ ಏರಿಕೆ, ಭ್ರಷ್ಟಾಚಾರದಿಂದ ಕಾರ್ಮಿಕ ವರ್ಗ ತತ್ತರಿಸಿ ಹೋಗಿದೆ. ದುಡಿಮೆಯ ಬಹುಪಾಲು ಹಣ ಆಹಾರಕ್ಕಾಗಿಯೇ ವಿನಿಯೋಗಿಸಬೇಕಾದ ಪರಿಸ್ಥಿತಿಯನ್ನು ಬದಲಾಯಿಸಲು ಕಾರ್ಮಿಕರು ರೈತರು ಒಗ್ಗಟ್ಟಾಗಿ ಹೋರಾಡಬೇಕೆಂದು ಹೇಳಿದರು.
ಹೆಂಚು ಕಾರ್ಮಿಕರ ಸಂಘದ ಮುಖಂಡ ವಿ.ನರಸಿಂಹ, ಸಿಐಟಿಯು ಸಂಚಾಲಕ ಚಂದ್ರಶೇಖರ ವಿ. ಮಾತನಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಬಲ್ಕೀಸ್, ಚಿಕ್ಕ ಮೊಗವೀರ, ನಾಗರತ್ನ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಮಹಾಬಲ ವಡೇರಹೋಬಳಿ ವಹಿಸಿದ್ದರು. ಸಿಐಟಿಯು ಮುಖಂಡ ಸಂತೋಷ ಹೆಮ್ಮಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಆರಂಭಕ್ಕೂ ಮುನ್ನ ಸಾವಿರಾರು ಮಂದಿ ಕಾರ್ಮಿಕರು ಕುಂದಾಪುರ ನಗರದಲ್ಲಿ ಮೆರವಣಿಗೆ ನಡೆಸಿದರು.
ಬೈಂದೂರಿನಲ್ಲಿ ಕಾರ್ಮಿಕರ ಮೆರವಣಿಗೆ- ಸಭೆ
ಸಿಐಟಿಯು ನೇತೃತ್ವದಲ್ಲಿ ಮೇದಿನಾಚರಣೆ ಅಂಗವಾಗಿ ಬೈಂದೂರಿನಲ್ಲಿ ಇಂದು ಚಂಡೆ ವಾದ್ಯದೊಂದಿಗೆ ಕೂಡಿದ ಕಾರ್ಮಿಕರ ವರ್ಣ ರಂಜಿತ ಬೃಹತ್ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ಜರಗಿತು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಮುಖಂಡ ರಮೇಶ ಗುಲ್ವಾಡಿ, ಸಿಐಟಿಯು ಜಿಲ್ಲಾ ಮುಖಂಡರಾದ ಗಣೇಶ ತೊಂಡೆಮಕ್ಕಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ಜಯಶ್ರೀ ಪಡುವರಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಧರ ದೇವಾಡಿಗ ಉಪ್ಪುಂದ, ಮಂಜು ಪಡುವರಿ, ಉದಯ ಗಾಣಿಗ ಮೊಗೇರಿ ಕೆರ್ಗಾಲ್, ಅಮ್ಮಯ್ಯ ಪೂಜಾರಿ ಬಿಜೂರು, ರಾಮ ಕಂಭದಕೋಣೆ, ರೋನಿ ವಿನೋದ್, ನಜರತ್ ಪಡುವರಿ, ಲಕ್ಷಣ ದೇವಾಡಿಗ ಯಡ್ತರೆ, ಶೀನ ಕೊಠಾರಿ ಅಲಂದೂರು ಯಡ್ತರೆ, ಸಿಐಟಿಯು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ರಾಜೀವ ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು. ವಿಜಯ ಬಿ. ವಂದಿಸಿದರು ವೆಂಕಟೇಶ ಕೋಣಿ ಕಾರ್ಯಕ್ರಮ ನಿರೂಪಿಸಿದರು.

