ಮೋದಿ ಕಾರ್ಯಕ್ರಮದಲ್ಲಿ 3 ಲಕ್ಷ ಮಂದಿ ಸೇರುವ ನಿರೀಕ್ಷೆ: ಉದಯ ಕುಮಾರ್ ಶೆಟ್ಟಿ

ಉಡುಪಿ, ಮೇ 1: ಮುಲ್ಕಿಯ ಕೋಲ್ನಾಡ್‌ನಲ್ಲಿ ಮೇ 3ರಂದು ಬೆಳಗ್ಗೆ 11ಗಂಟೆಗೆ ನಡೆಯಲಿರುವ ಅವಿಭಜಿತ ದ.ಕ. ಜಿಲ್ಲೆಗಳ ಒಟ್ಟು 13 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಇದರಲ್ಲಿ ಎರಡೂ ಜಿಲ್ಲೆಗಳ 3ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಬಿಜೆಪಿ ಮಂಗಳೂರು ಪ್ರಭಾರಿ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಪು ಮತ್ತು ಮುಲ್ಕಿ- ಮೂಡಬಿದಿರೆ ಕ್ಷೇತ್ರದಿಂದ 30ಸಾವಿರ ಹಾಗೂ ಉಳಿದ ಕ್ಷೇತ್ರ ಗಳಿಂದ ತಲಾ 20ಸಾವಿರದಂತೆ ಜನ ಭಾಗವಹಿಸಲಿರುವರು. ಅದಕ್ಕೆ ಬೇಕಾದ ಎಲ್ಲ ರೀತಿಯ ತಯಾರಿಯನ್ನು ನಡೆಸಲಾಗುತ್ತಿದೆ ಎಂದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮೇ 6ರಂದು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, ಮಧ್ಯಾಹ್ನ 12ಗಂಟೆಗೆ ಪುತ್ತೂರು, 1.30ಕ್ಕೆ ಬಂಟ್ವಾಳ ಹಾಗೂ 3ಗಂಟೆಗೆ ಕಾರ್ಕಳದಲ್ಲಿ ನಡೆಯುವ ಸಮಾವೇಶ ದಲ್ಲಿ ಭಾಗವಹಿಸಲಿರುವರು ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಈವರೆಗೆ ಸ್ವಂತ ಶಕ್ತಿಯಿಂದ ಸರಕಾರ ರಚಿಸಿಲ್ಲ. ಈ ಬಾರಿ ಮೋದಿ ನೀಡಿದ 150ಕ್ಕೂ ಹೆಚ್ಚಿನ ಅಧಿಕ ಸ್ಥಾನದ ಗುರಿಯೊಂದಿಗೆ ಮುನ್ನಡೆ ಯುತ್ತಿದ್ದೇವೆ. ಉಡುಪಿ, ದ.ಕ. ಮತ್ತು ಕೊಡಗು ಜಿಲ್ಲೆಯ 15ಸ್ಥಾನ ಗಳಲ್ಲಿಯೂ ನಾವು ಗೆಲವು ಸಾಧಿಸಲಿದ್ದೇವೆ. ಹಿಂದುತ್ವ ಮತ್ತು ಅಭಿವೃದ್ಧಿ ಜೊತೆಯಾಗಿ ಮುಖ್ಯ ಅಜೆಂಡಾ ಮಾಡಿಕೊಂಡು ನಾವು ಈ ಬಾರಿ ಚುನಾವಣೆ ಗೆಲ್ಲುವ ಸಂಕಲ್ಪ ಮಾಡಿದ್ದೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಘವೇಂದ್ರ ಕಿಣಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.







