ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದುರ್ಬಲ ಅಭ್ಯರ್ಥಿ: ಪ್ರಮೋದ್ ಮಧ್ವರಾಜ್ ಟೀಕೆ

ಉಡುಪಿ, ಮೇ 1: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಇತಿಹಾಸ ದಲ್ಲೇ ಪ್ರಥಮ ಬಾರಿಗೆ ಅತ್ಯಂತ ದುರ್ಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಇದರಿಂದ ಇಡೀ ರಾಜ್ಯದಲ್ಲಿ ಬಿಜೆಪಿಗೆ ಅತ್ಯಂತ ಹೆಚ್ಚು ಅಂತರದಲ್ಲಿ ಗೆಲ್ಲುವ ಅವಕಾಶ ಉಡುಪಿ ಕ್ಷೇತ್ರದಲ್ಲಿ ಒದಗಿ ಬಂದಿದೆ. ಪ್ರಸಾದ್‌ರಾಜ್‌ಗೆ ಯಾವುದೇ ರಾಜಕೀಯ ಗಂಧಗಾಳಿ ಗೊತ್ತಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟೀಕಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಶ್‌ಪಾಲ್ ಸುವರ್ಣರ ಕುರಿತ ಅಪ್ರಚಾ ರಕ್ಕೆ ಕಿವಿಗೋಡದೆ ಎಲ್ಲರು ಅವರನ್ನು ಬೆಂಬಲಿಸಬೇಕು. ಕಾಂಗ್ರೆಸ್ ಪಕ್ಷ ಕೊಡುವ ಗ್ಯಾರಂಟಿಯನ್ನು ನೀವು ನಂಬಬೇಡಿ. ಆದರೆ ಯಶ್ಪಾಲ್ ಸುವರ್ಣ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಾವು ಕೊಡುವ ಗ್ಯಾರಂಟಿಯನ್ನು ನಂಬಿ ಎಂದರು.
ಬಿಜೆಪಿಯಲ್ಲಿ ಪ್ರಮೋದ್ ಗಾಳ ಹಾಕಿಕೊಂಡೇ ಕುಳಿತುಕೊಳ್ಳಬೇಕೆಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 1989ರಲ್ಲಿ ಪ್ರಥಮ ಬಾರಿ ಶಾಸಕರಾದ ದಿನದಿಂದ ಡಿಕೆ ಶಿವಕುಮಾರ್ ನಮಗೆ ಪರಿಚಯ. ಆಗ ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು ಮತ್ತು ಮೊನ್ನೆ ಅವರೇ ಅಧಿಕೃತವಾಗಿ ಘೋಷಿಸಿರುವ ಆಸ್ತಿಯನ್ನು ನೋಡಿದರೆ ಡಿಕೆಶಿ ಎಲ್ಲಿಂದ ಎಲ್ಲಿಗೆ ಬಂದು ತಲುಪಿದ್ದಾರೆ ಎಂಬುದು ಗೊತ್ತಾಗುತ್ತದೆ. ಈ ರೀತಿ ಲೂಟಿ ಮಾಡಿ ಸಾಮ್ರಾಜ್ಯವನ್ನು ಕಟ್ಟಿ ಹೆಮ್ಮೆ ಪಡುವುದಕ್ಕಿಂತ ಪ್ರಾಮಾಣಿಕವಾಗಿ ಗಾಳ ಹಾಕಿ ಮೀನು ಹಿಡಿದು ಬದುಕು ನಡೆಸುವುದೇ ಸರ್ವ ಶ್ರೇಷ್ಠವಾದುದು ಎಂದರು.
ಕಾರವಾರದಲ್ಲಿ ಚುನಾವಣಾ ಪ್ರಚಾರದ ವೇಳೆ ಗ್ರಾಮಸ್ಥರು ತರಾಟೆಗೆ ತೆಗೆದು ಕೊಂಡ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪ್ರಾಬಲ್ಯ ಇರುವ ಗ್ರಾಮದಲ್ಲಿ ನಡೆದ ಸಣ್ಣ ಘಟನೆ. ನೂರಾರು ಜನ ಸೇರಿದ ಸಭೆಯಲ್ಲಿ ವಿರೋಧ ಪಕ್ಷದ ಕುಮ್ಮಕ್ಕಿಗೆ ಬಲಿಯಾಗಿ ಕೇವಲ 10 ಮಂದಿ ಗಲಾಟೆ ಮಾಡಿದ್ದರು. ಚುನಾವಣೆ ಸಂದರ್ಭದಲ್ಲಿ ಇದೆಲ್ಲ ಸಾಮಾನ್ಯ ಎಂದು ತಿಳಿಸಿದರು.
ಪ್ರಮೋದ್ ಹಿಂದೆ ಒಬ್ಬನೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಬಿಜೆಪಿ ಬಂದಿಲ್ಲ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಷ್ಟೊ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಇಲ್ಲದೆ ಬಂದು ಯಶ್‌ಪಾಲ್ ಸುವರ್ಣರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಶೇ.20-30 ಕಾಂಗ್ರೆಸ್ ಕಾರ್ಯಕರ್ತರು ಇಂದು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿಲ್ಲ. ಕೆಲವರು ತಟಸ್ಥರಾಗಿದ್ದರೆ ಇನ್ನು ಕೆಲವರು ಯಶ್‌ಪಾಲ್‌ಗೆ ಪರೋಕ್ಷ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಹೇಳಿದರು.
ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮಾತನಾಡಿ, ನನ್ನ ಶಿಕ್ಷಣದ ಬಗ್ಗೆ ಟೀಕೆ ಮಾಡಿರುವ ಡಿಕೆಶಿಗೆ ಪ್ರತಿಕ್ರಿಯೆ ಕೊಡಲು ನಾನು ಹೋಗುವುದಿಲ್ಲ. ಅವರಿಗೆ ಇಂಗ್ಲಿಷ್, ಬ್ಯಾಂಕಿಂಗ್ ಹಾಗೂ ಶಿಕ್ಷಣದ ಬಗ್ಗೆ ಎಷ್ಟು ಪರಿಜ್ಞಾನ ಇದೆ ಎಂಬುದನ್ನು ಚರ್ಚೆಯ ಮೂಲಕ ಉತ್ತರ ಕೊಡಲು ನಾನು ಬದ್ಧನಿದ್ದೇನೆ. ನನ್ನ ವಿದ್ಯಾಭ್ಯಾಸ ಏನು ಎಂಬುದು ಜನರಿಗೆ ಗೊತ್ತಿದೆ. ನನ್ನ ತಂದೆ ಕೂಡ ಪದವೀಧರರಾಗಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದುದರಿಂದ ನನ್ನ ಶಿಕ್ಷಣದ ಬಗ್ಗೆ ಕೇಳುವ ಹಕ್ಕು ಡಿಕೆಶಿಗೆ ಇಲ್ಲ ಎಂದು ಟೀಕಿಸಿದರು.
‘ರಾಹುಲ್ ಗಾಂಧಿ ಮೀನುಗಾರರೊಂದಿಗೆ ಮಾಡುವ ಮೂರನೇ ಸಂವಾದ ಇದು. ಮೊದಲ ಸಂವಾದ ನಡೆಸುವಾಗ ಯುಪಿಎ ಸರಕಾರ ಅಧಿಕಾರದಲ್ಲಿ ಇತ್ತು. ಆಗ ಕೊಟ್ಟ ಆಶ್ವಾಸನೆಯಲ್ಲಿ ಒಂದನ್ನು ಕೂಡ ರಾಹುಲ್ ಗಾಂಧಿ ಈವರೆಗೆ ಈಡೇರಿಸಿಲ್ಲ. ಅವರಿಗೆ ಸಂವಾದ ಎಂಬುದು ಟೈಮ್‌ಪಾಸ್‌ಗೆ ಇರುವ ವ್ಯವಸ್ಥೆ. ಅದಕ್ಕೆ ಬೆಲೆ ಕೊಡುವ ಅಗತ್ಯ ಇಲ್ಲ. ಕಾಂಗ್ರೆಸ್ ಗ್ಯಾರಂಟಿಗೆ ಇರುವ ಬೆಲೆಯೇ ರಾಹುಲ್ ಗಾಂಧಿ ಸಂವಾದಕ್ಕೆ ಇರುವುದು’
-ಪ್ರಮೋದ್ ಮಧ್ವರಾಜ್, ಮಾಜಿ ಸಚಿವರು







