ಪ್ರಧಾನಿ ಮೋದಿ ಬಗ್ಗೆ ಹೇಳಿಕೆ: ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನಾಲಾಯಕ್' ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದೇಶದ ಪ್ರಧಾನಿ ಮೋದಿಯವರನ್ನ ಜಗತ್ತೇ ಮೆಚ್ಚಿಕೊಂಡರೂ ಅಂತಹ ನಾಯಕರ ವಿರುದ್ಧ ಕೆಟ್ಟ ಪದವನ್ನು ಬಳಸಿರುವ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧ ದೂರನ್ನು ದಾಖಲಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಹಿಂದಿನ ಚುನಾವಣೆಗಳಲ್ಲೂ ಮೋದಿಯವರ ಬಗ್ಗೆ ಕೆಟ್ಟದಾಗಿ, ಸಂವಿಧಾನವಿರೋಧಿ ಮಾತುಗಳಿಂದ ನಿಂದಿಸಿದ್ದರು. ಕರ್ನಾಟಕದ ಅಸೆಂಬ್ಲಿ ಚುನಾವಣೆಯಲ್ಲಿ ಹತಾಶರಾದ ಕಾಂಗ್ರೆಸ್ ನಾಯಕರು ಮತ್ತೆ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮೋದಿಯವರನ್ನು ವಿಷ ಸರ್ಪ ಎಂದಿದ್ದರು. ಇವತ್ತು ಪ್ರಿಯಾಂಕ್ ಖರ್ಗೆ ಅವರು ದೆಹಲಿಯಲ್ಲಿ ನಾಲಾಯಕ್ ಪ್ರಧಾನಿ ಇದ್ದಾರೆಂದು ಹೇಳಿದ್ದಾರೆ ಎಂದು ತಿಳಿಸಿದರು.





