ಮಡಿಕೇರಿಗೆ ಅರಕಲಗೂಡು, ವಿರಾಜಪೇಟೆಗೆ ಬೆಂಗಳೂರಿನಿಂದ ಅಭ್ಯರ್ಥಿಗಳನ್ನು ಅಮದು ಮಾಡಿಕೊಂಡ ಕಾಂಗ್ರೆಸ್: ಪ್ರತಾಪ್‍ಸಿಂಹ

ಸೋಮವಾರಪೇಟೆ: ಮಡಿಕೇರಿ ಕ್ಷೇತ್ರಕ್ಕೆ ಅರಕಲಗೂಡುನಿಂದ, ವಿರಾಜಪೇಟೆ ಕ್ಷೇತ್ರಕ್ಕೆ ಬೆಂಗಳೂರಿನಿಂದ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಅಮದು ಮಾಡಿಕೊಂಡಿದೆ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ್‍ಸಿಂಹ ಹೇಳಿದರು.
ಭಾರತೀಯ ಜನತಾಪಾರ್ಟಿಯ ವತಿಯಿಂದ ಸೋಮವಾರಪೇಟೆ ಜೇಸಿ ವೇದಿಕೆಯಲ್ಲಿ ಸೋಮವಾರ ನಡೆದ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸ್ಥಳೀಯರಾದ ಮಾಜಿ ಸಚಿವ ಬಿ.ಎ.ಜೀವಿಜಯ, ಚಂದ್ರಮೌಳಿ, ಹರಪಳ್ಳಿ ರವೀಂದ್ರ, ಚಂದ್ರಕಲಾ, ಕೆ.ಎಂ.ಲೋಕೇಶ್ ಕುಮಾರ್ ಅವರಿಗೆ ಟಿಕೆಟ್ ಕೊಡದೆ, ಹೊರಗಿನವರಿಗೆ ಕೊಟ್ಟು ಹಣಬಲದಿಂದ ಗೆಲುವು ಸಾಧಿಸುತ್ತೇವೆ ಎಂಬುದು ಭ್ರಮೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಈ ಹಿಂದೆ ಕೊಡಗಿನಲ್ಲಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿ ಠೇವಣಿ ಹಣ ಕಳೆದುಕೊಂಡು ವಾಪಾಸ್ಸು ಹೋಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದರು, ಗೆಲುವು ಅಸಾಧ್ಯ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್‍ನ ಇಬ್ಬರು ಅಭ್ಯರ್ಥಿಗಳು ಗೆಲವು ಸಾಧಿಸಿ ಏನೂ ಮಾಡಬೇಕಿಲ್ಲ. ಎಲ್ಲ ಅಭಿವೃದ್ಧಿ ಕೆಲಸಗಳನ್ನು ಅಪ್ಪಚ್ಚುರಂಜನ್ ಹಾಗು ಕೆ.ಜಿ.ಬೋಪಯ್ಯ ಮಾಡಿ ಮುಗಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿದರೆ, ಕೊಡಗಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಇರಬೇಕು ಎಂದು ಕುಟುಕಿದರು.
ಮಡಿಕೇರಿಯಲ್ಲಿ ಮೆಡಿಕಲ್ ಕಾಲೇಜು, ಕೊಡಗು ವಿಶ್ವವಿದ್ಯಾಲಯ, ಪಾಲಿಟೆಕ್ನಿಕ್ ಕಾಲೇಜು, ಐಟಿಐ, ಮುರಾರ್ಜಿ ಶಾಲೆ, ಅಂಬೇಡ್ಕರ್ ವಸತಿ ಶಾಲೆ, ಸುಸಜ್ಜಿತ ಜಿಲ್ಲಾಸ್ಪತ್ರೆ, ಇಂಜಿಯರ್ ಕಾಲೇಜು, ಸೈನಿಕ ಶಾಲೆ, ಸಿಂಥೆಟಿಕ್ ಟರ್ಫ್, ಗ್ರಾಮೀಣ ರಸ್ತೆಗಳು, ರಾಜ್ಯ ಹೆದ್ದಾರಿ ಅಭಿವೃದ್ಧಿ ಎಲ್ಲಾ ರೀತಿಯ ಅಭಿವೃದ್ಧಿ ಕಾಮಗಾರಿ ನಡೆದಿವೆ. ಹೈವೆ, ರೈಲ್ವೆ ಮುಂದಿನ ಒಂದು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು.
ದೇವಸ್ಥಾನ ನಿರ್ಮಾಣಕ್ಕೆ ಮೂರು ಲಕ್ಷ, ಊರಿಗೆ, ಕ್ರೀಡೆಗೆ ಹಣ ಕೊಟ್ಟು, ಮತಕ್ಕೂ ಹಣ ಕೊಟ್ಟು, ಜಾತಿಯನ್ನು ತಂದು ಚುನಾವಣೆ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿದ್ದಾರೆ. ಯಾರು ಮತಗಳನ್ನು ಮಾರಿಕೊಳ್ಳಬಾರದು ಎಂದು ಸಂಸದರು ಮತದಾರರಿಗೆ ಕಿವಿಮಾತು ಹೇಳಿದರು.
ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, 1800ಕೋಟಿ ರೂ.ಗಳ ಅನುದಾನ ತಂದು ಮಡಕೇರಿ ಕ್ಷೇತ್ರದ ಅಭಿವೃದ್ದಿ ಕಾಮಗಾರಿ ಮಾಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಪರಿಶಿಷ್ಟ ಜಾತಿ-ಪಂಗಡದ ಕಾಲನಿ ರಸ್ತೆಗಳನ್ನು ಕಾಂಕ್ರೀಟೀಕರಣ ಮಾಡಲಾಗಿದೆ. ಹಳ್ಳಿ ಹಳ್ಳಿಗೆ ರಸ್ತೆಗಳನ್ನು ಮಾಡಲಾಗಿದೆ ಎಂದರು.
ತಾಲೂಕಿನಲ್ಲಿ ಅಕ್ರಮ ಸಕ್ರಮದಲ್ಲಿ 12 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. 94ಸಿ ಯಲ್ಲಿ 6ಸಾವಿರ ಮಂದಿ ಹಾಗು ಒಂದು ಸಾವಿರ ಮಂದಿಗೆ ಅರಣ್ಯ ಭೂಮಿಯಲ್ಲಿ ಹಕ್ಕುಪತ್ರ ನೀಡಲಾಗಿದೆ.
ಅರಕಲುಗೂಡು ಕಡೆಯಿಂದ ಕೊಡಗಿನ ಶಾಲಾ ಕಾಲೇಜುಗಳಿಗೆವಿದ್ಯಾರ್ಥಿಗಳು ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲು ತಮ್ಮ ಹುಟ್ಟೂರಿನ ಕಡೆ ಅಭಿವೃದ್ಧಿ ಮಾಡಿ ಕೊಡಗಿನ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಮಾತನಾಡಲಿ ಎಂದು ಹೇಳಿದರು.








