ಕೃತಕ ಬುದ್ಧಿಮತ್ತೆ ಅಪಾಯಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಗೂಗಲ್ ತೊರೆದ AI ತಜ್ಞ ಜೆಫ್ರಿ ಹಿಂಟನ್
AI ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕೆ ವಿಷಾದವಿದೆ ಎಂದ 'ಗಾಡ್‌ಫಾದರ್ ಆಫ್ AI'

ಕ್ಯಾಲಿಫೋರ್ನಿಯಾ: 'ಗಾಡ್‌ಫಾದರ್ ಆಫ್ ಎಐ' ಎಂದೇ ಪರಿಗಣಿತರಾದ ಜೆಫ್ರಿ ಹಿಂಟನ್ ತಾವು ಅಭಿವೃದ್ಧಿಪಡಿಸಲು ಸಹಾಯ ಮಾಡಿದ ಕೃತಕ ಬುದ್ಧಿಮತ್ತೆ (AI) ಅಪಾಯಗಳ ಬಗ್ಗೆ ಮಾತನಾಡುವ ಉದ್ದೇಶದಿಂದ ಗೂಗಲ್ ಸೇವೆಯನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ. ಎಪ್ಪತ್ತೈದು ವರ್ಷದ ಹಿಂಟನ್ ಗೂಗಲ್‌ಗೆ ರಾಜೀನಾಮೆ ಘೋಷಿಸುವ ಜೊತೆಗೆ ಎಐ ಕ್ಷೇತ್ರದಲ್ಲಿ ತಾವು ಮಾಡಿದ ಕೆಲಸಕ್ಕೆ ವಿಷಾದವಿದೆ ಎಂದಿದ್ದಾರೆ.
ಕೃತಕ ಬುದ್ಧಿಮತ್ತೆಯ ಅಪಾಯಗಳ ಬಗ್ಗೆ ತಾವು ಮುಕ್ತವಾಗಿ ಮಾತನಾಡಬಹುದೆಂಬ ಕಾರಣಕ್ಕೆ ಗೂಗಲ್ ಹುದ್ದೆ ತೊರೆದಿರುವುದಾಗಿ ಹಾಗೂ ಇದರಿಂದ ಗೂಗಲ್ ಅನ್ನು ಟೀಕಿಸಲು ಸಾಧ್ಯವಾಗುವುದಾಗಿ ಅವರು ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆಯ ಕೆಲ ಅಪಾಯಗಳು ಭೀತಿ ಹುಟ್ಟಿಸುತ್ತವೆ. ಸದ್ಯಕ್ಕೆ ಕೃತಕ ಬುದ್ಧಿಮತ್ತೆ ನಮಗಿಂತ ಹೆಚ್ಚು ಬುದ್ಧಿವಂತವಲ್ಲದೇ ಇದ್ದರೂ ಮುಂದೆ ಹಾಗಾಗಬಹುದು ಎಂದು ಅವರು ಹೇಳಿದ್ದಾರೆ.
ಉದ್ಯೋಗಗಳನ್ನು ಕಡಿತಗೊಳಿಸುವ ಸಾಧ್ಯತೆ AI ಗಿದೆ ಹಾಗೂ ಯಾವುದು ಸತ್ಯ ಎಂದು ಹೆಚ್ಚಿನವರು ತಿಳಿಯದೇ ಇರುವಂತಾಗಬಹುದು. ಅದನ್ನು ಯಾರು ಕೆಟ್ಟ ಉದ್ದೇಶಗಳಿಗೆ ಬಳಸುತ್ತಾರೆ ಹಾಗೂ ಅವರನ್ನು ಹೇಗೆ ತಡೆಯಬಹುದೆಂಬುದೂ ತಿಳಿಯದಂತಾಗುತ್ತದೆ ಎಂದು ಅವರು ಸಂದರ್ಶನವೊಂದರಲ್ಲಿ ಇತ್ತೀಚೆಗೆ ಹೇಳಿದ್ದರು.