ಜೀವಿಜಯ ಕಾಂಗ್ರೆಸ್ ಗೆ ರಾಜೀನಾಮೆ: ಅಪ್ಪಚ್ಚು ರಂಜನ್ ಗೆ ಬೆಂಬಲ ನೀಡಿದರೆ ತಪ್ಪೇನು ಎಂದ ಮಾಜಿ ಸಚಿವ

ಮಡಿಕೇರಿ ಮೇ 2: ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚುರಂಜನ್ ಅವರಿಗೆ ಬೆಂಬಲ ಸೂಚಿಸುವುದರಲ್ಲಿ ತಪ್ಪೇನು ಎಂದು ಅವರು ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಿದ್ಧಾಂತದ ರಾಜಕಾರಣಕ್ಕೆ ಬೆಲೆ ಇಲ್ಲದಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಕೊಡಗು ಜಿಲ್ಲೆಯವರಿಗೇ ಟಿಕೆಟ್ ನೀಡಬೇಕೆಂದು ನಾನು ಮಾಡಿದ ಮನವಿಗೆ ಕೆಪಿಸಿಸಿ ಸ್ಪಂದನ ನೀಡಿಲ್ಲ ಮತ್ತು ನುಡಿದಂತೆ ನಡೆದುಕೊಂಡಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದರು.
ವಿಧಾನಸಭಾ ಚುನಾವಣೆ ಕಳೆದ ನಂತರ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚುರಂಜನ್ ಬಿಳಿಗೇರಿಯ ದೇವಾಲಯದಲ್ಲಿ ಮುಖಾಮುಖಿಯಾದಾಗ ಎಲ್ಲರನ್ನು ಸಮಾನವಾಗಿ ಕಾಣುವಂತೆ ಮತ್ತು ಸಂವಿಧಾನಕ್ಕೆ ಬದ್ಧರಾಗಿರುವಂತೆ ನಾನು ಸಲಹೆ ನೀಡಿದ್ದೆ. ಇದು ನನ್ನ ಕೊನೆಯ ಚುನಾವಣೆಯಾಗಿರುವುದರಿಂದ ಸಲಹೆಯಂತೆ ನಡೆದುಕೊಳ್ಳುವುದಾಗಿ ಅಪ್ಪಚ್ಚುರಂಜನ್ ಭರವಸೆ ನೀಡಿದ್ದಾರೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಬೆಂಬಲ ಸೂಚಿಸಿದರೆ ತಪ್ಪೇನು ಎಂದು ಜೀವಿಜಯ ಪ್ರಶ್ನಿಸಿದರು.
ಕೊಡಗಿನಲ್ಲಿ ಬೇಕಾದಷ್ಟು ರಾಜಾರಣಿಗಳಿದ್ದಾರೆ, ಆದರೆ ಕಾಂಗ್ರೆಸ್ ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ನಾನು ಸ್ಥಳೀಯ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸುವುದಾಗಿ ಹೇಳಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯವಾಗಿ ನನ್ನ ಬಳಿ ಯಾವುದೇ ಚರ್ಚೆ ಮಾಡಿಲ್ಲ. ಆದರೆ ಹಿರಿಯರಾದ ಮಾಜಿ ಪ್ರಧಾನಿ ದೇವೇಗೌಡರು ನನ್ನೊಂದಿಗೆ ಚರ್ಚಿಸಿದ್ದಾರೆ ಎಂದರು.
ಮಡಿಕೇರಿ ಕೇತ್ರದಲ್ಲಿ ಅಪ್ಪಚ್ಚುರಂಜನ್, ನಾಪಂಡ ಮುತ್ತಪ್ಪ ಹಾಗೂ ಮಂತರ್ ಗೌಡ ಸೇರಿದಂತೆ ಅನೇಕರು ಕಣದಲ್ಲಿದ್ದಾರೆ. ಎಸ್‌ಡಿಪಿಐ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ, ಯಾರು ಗೆಲ್ಲುತ್ತಾರೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆಗಳಿದೆ ಎಂದು ಜೀವಿಜಯ ಹೇಳಿದರು







