ನಾಪತ್ತೆಯಾದ ಇಬ್ಬರು ಬಾಲಕಿಯರ ಪತ್ತೆಗೆ ಹೊರಟ ಪೊಲೀಸರಿಗೆ ಸಿಕ್ಕಿದ್ದು 7 ಮೃತದೇಹಗಳು !

ವಾಷಿಂಗ್ಟನ್: ನಾಪತ್ತೆಯಾಗಿದ್ದ ಇಬ್ಬರು ಹದಿಹರೆಯದ ಹುಡುಗಿಯರ ಪತ್ತೆಗೆ ಹೊರಟಿದ್ದ ಪೊಲೀಸರಿಗೆ ಏಳು ಮೃತದೇಹಗಳು ಪತ್ತೆಯಾದ ಆಘಾತಕಾರಿ ಘಟನೆ ಅಮೆರಿಕಾದ ಒಕ್ಲಾಹಾಮದಿಂದ ವರದಿಯಾಗಿದೆ.
ಮೃತದೇಹಗಳನ್ನು ಗುರುತಿಸಲಾಗಿಲ್ಲ ಹಾಗೂ ಈ ಏಳು ಮೃತದೇಹಗಳಲ್ಲಿ ಪೊಲೀಸರು ಹುಡುಕುತ್ತಿದ್ದ 14 ಮತ್ತು 16 ವರ್ಷ ಪ್ರಾಯದ ಇಬ್ಬರು ಬಾಲಕಿಯರ ಮೃತದೇಹಗಳು ಸೇರಿವೆಯೇ ಎಂಬುದೂ ತಿಳಿದು ಬಂದಿಲ್ಲ.
ಈ ಇಬ್ಬರು ಬಾಲಕಿಯರು ಲೈಂಗಿಕ ಅಪರಾಧ ಪ್ರಕರಣದ ಆರೋಪಿಯೊಬ್ಬನ ಜೊತೆ ಕಾಣಿಸಿಕೊಂಡಿದ್ದರೆಂದು ಹೇಳಲಾಗಿದೆ.
ಏಳು ಮೃತದೇಹಗಳು ಹೆನ್ರಿಯೆಟ್ಟಾ ನಗರದಲ್ಲಿ ಪತ್ತೆಯಾದ ಬೆನ್ನಿಗೆ ಶೋಧ ಕಾರ್ಯಾಚರಣೆಯನ್ನು ಪೊಲೀಸರು ನಿಲ್ಲಿಸಿದ್ದಾರೆ. ಪತ್ತೆಯಾದ ಏಳು ಮೃತದೇಹಗಳಲ್ಲಿ ನಾಪತ್ತೆಯಾದ ಬಾಲಕಿಯರ ಮೃತದೇಹಗಳೂ ಇವೆ ಎಂದು ಕೆಲ ಸುದ್ದಿ ಸಂಸ್ಥೆಗಳು ವರದಿ ಬಂದಿವೆ.
ಲೈಂಗಿಕ ಅಪರಾಧಿ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿತನಾಗಿದ್ದ ಜೆಸ್ಸೆ ಎಲ್ ಮೆಕ್‌ಫ್ಯಾಡನ್ ಎಂಬಾತನಿಗೆ ಸೇರಿದ ಸ್ಥಳದಲ್ಲಿ ಮೃತದೇಹಗಳು ಪತ್ತೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ಬಾಲಕಿಯರು ಕೊನೆಯ ಬಾರಿಗೆ ಮೆಕ್‌ಫ್ಯಾಡನ್(39)ಗೆ ಸೇರಿದ ಬಿಳಿ ಚೆವ್ರೊಲೆಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
ಸೋಮವಾರ ಆತ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು ಎಂದು ತಿಳಿದು ಬಂದಿದೆ. ಆದರೆ ಆತ ಹಾಜರಾಗದೇ ಇದ್ದಾಗ ವಾರಂಟ್ ಹೊರಡಿಸಲಾಗಿದೆ.