ದ.ಕ.ಸಂಸದರ ಕ್ಷೇತ್ರ ವ್ಯಾಪ್ತಿಯಲ್ಲಿ 38,226.68 ಕೋ.ರೂ.ಗಳ ಯೋಜನೆ ಅನುಷ್ಠಾನ: ಕೃಷ್ಣಪ್ಪಪೂಜಾರಿ ಕಲ್ಲಡ್ಕ

ಮಂಗಳೂರು, ಮೇ 2: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ. ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್‌ರ ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗೆ 38,226.68 ಕೋ.ರೂ.ಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಕೇಂದ್ರ ಸರಕಾರದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ದ.ಕ.ಸದಸ್ಯ ಕೃಷ್ಣಪ್ಪಪೂಜಾರಿ ಕಲ್ಲಡ್ಕ ಹೇಳಿದ್ದಾರೆ.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಜನತೆಗೆ ಬಿಜೆಪಿಯೇ ಭರವಸೆಯಾಗಿದ್ದು, ತಾರತಮ್ಯವಿಲ್ಲದೆ ಅಭಿವೃದ್ಧಿ ಯೋಜನೆಗಳ ಲಾಭವನ್ನು ಜನತೆಗೆ ತಲುಪಿಸುವಲ್ಲಿ ಪಕ್ಷ ನಿರಂತರವಾಗಿ ಕೆಲಸ ಮಾಡುತ್ತಿದೆ. ಆದರ್ಶ ಗ್ರಾಮ ಯೋಜನೆಯಡಿ ಸುಳ್ಯದ ಬಳ್ಪಎಂಬ ಕುಗ್ರಾಮದಲ್ಲಿ 33 ಕೋ.ರೂ.ಗಳ ಅನುದಾನದಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ನಿರ್ಮಾಣಕ್ಕೆ ಅನುದಾನ ದೊರಕಿಸಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ನವಮಂಗಳೂರು ಬಂದರಿನಲ್ಲಿ ಕಂಟೈನರ್ ಮತ್ತು ಕಾರ್ಗೊ ನಿರ್ವಹಣೆಗೆ ಗ್ಯಾಸ್ ಟರ್ಮಿನಲ್, ತೈಲ ಸಂಗ್ರಹ ಟ್ಯಾಂಕ್ ನಿರ್ಮಾಣ, ಕುಳಾಯಿಯಲ್ಲಿ ಮೀನುಗಾರಿಕಾ ಹಾರ್ಬರ್ ನಿರ್ಮಾಣ, ಎಂಆರ್‌ಪಿಎಲ್‌ನ ಉಪ್ಪು ನೀರು ಶುದ್ಧೀಕರಣ ಘಟಕ, ಕೆಐಒಸಿಎಲ್‌ನ ಪೆಲ್ಲೆಟ್ ಪ್ಲಾಂಟ್‌ನಲ್ಲಿ ವರ್ಟಿಕಲ್ ಪ್ರೆಸ್ಸರ್ ಫಿಲ್ಟರ್ ಯುನಿಟ್ ಮತ್ತು ಗ್ಯಾಸ್ ಕನ್ವರ್ಷನ್ ಪ್ಲಾಂಟ್, ಬ್ಲಾಸ್ಟ್ ಫರ್ನೇಸ್ ಯುನಿಟ್ ನವೀಕರಣ ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ಕೇಂದ್ರ ಸರಕಾರ ನೀಡುವಲ್ಲಿ ಸಂಸದರು ಶ್ರಮಿಸಿರುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಘುರಾಮ ಮೊಗೇರ ಪುನರೂರು, ಜಯಶ್ರೀ ಕುಲಾಲ್ ಕೋಟೆಕಾರ್, ರಾಮದಾಸ್ ಹಾರಾಡಿ ಪುತ್ತೂರು, ಬಿಜೆಪಿ ಮುಖಂಡ ಸಂಜಯ್ ಪ್ರಭು ಉಪಸ್ಥಿತರಿದ್ದರು.