ಕಾಂಗ್ರೆಸ್ ಪ್ರಣಾಳಿಕೆ ಹಿಂದೆ ಪಿಎಫ್‍ಐ ಒತ್ತಡ: ಹಿಮಂತ ಬಿಸ್ವಾ ಶರ್ಮಾ ಆರೋಪ

ಬೆಂಗಳೂರು, ಮೇ 2: ‘ಪಿಎಫ್‍ಐ ಒತ್ತಡದಿಂದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‍ನ ಪ್ರಣಾಳಿಕೆ ಸಿದ್ಧಗೊಂಡಿದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ.
ಮಂಗಳವಾರ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಕರ್ನಾಟಕ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಇದು, ದೇಶಾದ್ಯಂತ ಏಕರೂಪ ನೀತಿ ಜಾರಿಗೊಳ್ಳಲು ರಾಷ್ಟ್ರವ್ಯಾಪಿ ಒತ್ತಡಕ್ಕೆ ಹಾದಿ ಮಾಡಿಕೊಡಲಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ಇಂದಿನ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.
ಆಧಾರ್‍ನಿಂದ ಪೌರತ್ವ ದೃಢೀಕರಣವಾಗುವುದಿಲ್ಲ. ಆಧಾರ್ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ದೇಶದಲ್ಲಿ ಎನ್‍ಆರ್‍ಸಿ ಜಾರಿಯಾಗಿಲ್ಲ. ಸುದೀರ್ಘ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಇಂದಿನವರೆಗೆ ಈ ಬಗ್ಗೆ ಚಕಾರವೆತ್ತಿಲ್ಲ. ಎನ್‍ಆರ್‍ಟಿ ಜಾರಿಗೆ ಅಸ್ಸಾಂನಲ್ಲಿ ಬಿಜೆಪಿ ಸರಕಾರ ತೆಗೆದುಕೊಂಡ ಕ್ರಮವು, ರಾಷ್ಟ್ರವ್ಯಾಪಿ ಎನ್‍ಆರ್‍ಸಿ ಜಾರಿಗೊಳ್ಳಲು ರಾಷ್ಟ್ರವ್ಯಾಪಿ ಒತ್ತಡಕ್ಕೆ ಹಾದಿ ಮಾಡಿಕೊಡಲಿದೆ ಎಂದು ಹೇಳಿದರು.
ಬಜರಂಗದಳ ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿರುವ ಕಾಂಗ್ರೆಸ್, ಪಿಎಫ್‍ಐ ಏಕೆ ನಿಷೇಧಿಸಿರಲಿಲ್ಲ ಎಂದು ಪ್ರಶ್ನಿಸಿದ ಬಿಸ್ವಾಸ್, ‘ಕಾಂಗ್ರೆಸ್, ಇಂಡಿಯನ್ ಮುಸ್ಲಿಂ ಲೀಗ್‍ನೊಂದಿಗೆ ಮೈತ್ರಿ ಹೊಂದಿದೆ. ಕಾಂಗ್ರೆಸ್, ಜಾತ್ಯತೀತ ಪಕ್ಷವಲ್ಲ. ಶೇ.40 ಪಸೆರ್ಂಟ್ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ, ಬೋಫೋರ್ಸ್ ಎಷ್ಟು ದೊಡ್ಡ ಹಗರಣ ಎಂಬುದನ್ನು ಕಾಂಗ್ರೆಸ್ ಅವಲೋಕಿಸಬೇಕು’ ಎಂದು ಹೇಳಿದರು.