ಪಿಎಫ್ ಹಣ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದು ತಪ್ಪು: ಜಯಕರ ಶೆಟ್ಟಿ

ಉಡುಪಿ: ಸಹಕಾರ ಸಂಘಗಳ ಸಿಬ್ಬಂದಿಗಳು ವೃತ್ತಿಯಿಂದ ನಿವೃತ್ತಿ ಗೊಂಡ ಬಳಿಕ ಸುಗಮವಾಗಿ ಜೀವನ ಸಾಗಿ ಸಲು ನಿವೃತ್ತಿ ಭತ್ಯೆ ಅಥವಾ ವೇತನ ಪಡೆಯುವುದು ಅಗತ್ಯ. ಆದುದರಿಂದ ಸಹಕಾರಿ ಸಂಸ್ಥೆಗಳು ಸಿಬ್ಬಂದಿ ಹಾಗೂ ಸಂಸ್ಥೆಗಳ ವಂತಿಗೆ ಹಣವನ್ನು ಭವಿಷ್ಯ ನಿಧಿ ಪಾವತಿಸದೆ ವ್ಯವಹಾರದಲ್ಲಿ ತೊಡಗಿಸಿಕೊಂಡರೆ ತಪ್ಪಾಗು ತ್ತದೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ಗಳ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಎಲ್ಲ ಸಹಕಾರ ಸಂಘಗಳ/ಬ್ಯಾಂಕ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯವರಿಗೆ ಸಹಕಾರ ಸಂಘಗಳ ಸಿಬ್ಬಂದಿಗೆ ಭವಿಷ್ಯ ನಿಧಿ ಪಿಂಚಣಿ ಯೋಜನೆ ಅಳವಡಿಕೆ ಬಗ್ಗೆ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಮಂಗಳ ವಾರ ಆಯೋಜಿಸಲಾದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ನಮ್ಮ ವ್ಯವಹಾರದಲ್ಲಿ ಸಿಬ್ಬಂದಿ ಅಥವಾ ಸಂಸ್ಥೆಯ ವಂತಿಗೆ ಹಣವನ್ನು ತೊಡಗಿಸಿಕೊಂಡರೆ ಭವಿಷ್ಯ ನಿಧಿ ಇಲಾಖೆಯವರು ನಿವೃತ್ತಿ ವೇತನ ಕೊಡಲು ಸಾಧ್ಯವಿಲ್ಲ. ಕೆಲವು ಸಂಸ್ಥೆಗಳು ತಿಳುವಳಿಕೆ ಕೊರತೆಯಿಂದ ಸಂಸ್ಥೆಯ ವಂತಿಗೆ ಹಣವನ್ನು ವ್ಯವಹಾರ ತೊಡಗಿಸಿಕೊಳ್ಳುತ್ತಿದೆ. ಇದರಿಂದ ನಿವೃತ್ತಿ ಬಳಿಕ ಸಿಬ್ಬಂದಿ ಗಳು ಯಾವುದೇ ಪ್ರಯೋಜನ ಪಡೆಯಲು ಸಾಧ್ಯವಿರುವುದಿಲ್ಲ ಎಂದರು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿವೃತ್ತ ಕಾನೂನು ಅಧಿಕಾರಿ ಬಿ.ವಿ.ಮಂಜುನಾಥ್ ಉದ್ಘಾಟಿಸಿದರು. ಭವಿಷ್ಯ ನಿಧಿ ಇಲಾಖೆಯ ನಿವೃತ್ತ ಸೆಕ್ಷನ್ ಸೂಪರ್‌ವೈಸರ್ ಸತೀಶ್ ಎನ್. ಮುಖ್ಯ ಅತಿಥಿಯಾಗಿದ್ದರು.
ವೇದಿಕೆಯಲ್ಲಿ ಯೂನಿಯನ್ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಹರೀಶ್ ಕಿಣಿ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ಬಿ.ಬಿ. ಸ್ವಾಗತಿಸಿ ವಂದಿಸಿದರು.