ಮದುವೆಯಾಗಲು ಯುವಕನಿಗೆ ನೀಡಿದ್ದ ಪೆರೋಲ್ ಅವಧಿ ಮತ್ತೆ ವಿಸ್ತರಿಸಿದ ಹೈಕೋರ್ಟ್

ಬೆಂಗಳೂರು, ಮೇ 2: ಯುವಕನೊಬ್ಬನಿಗೆ ತನ್ನ ಪ್ರಿಯತಮೆಯನ್ನು ಮದುವೆಯಾಗುವುದಕ್ಕಾಗಿ 15 ದಿನಗಳ ಕಾಲ ನೀಡಿದ್ದ ಪೆರೋಲ್‍ನ್ನು ಹೈಕೋರ್ಟ್ ಮತ್ತೆ 60 ದಿನಗಳ ಕಾಲ ವಿಸ್ತರಣೆ ಮಾಡಿದೆ. ಪೆರೋಲ್ ಪಡೆದ ಆತ ಕೊಲೆ ಪ್ರಕರಣದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
ಕೊಲೆ ಪ್ರಕರಣಯೊಂದರಲ್ಲಿ 10 ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿರುವ ಆನಂದ್‍ನನ್ನು ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರಿಯತಮೆ ನೀತಾ ಮತ್ತು ಆತನ ತಾಯಿ ವಿವಾಹವಾಗಲು ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಮತ್ತೊಂದು ಮಧ್ಯಂತರ ಅರ್ಜಿಯನ್ನು ಸಲ್ಲಿಸಿ ಪೆರೋಲ್ ಅವಧಿಯನ್ನು ಮತ್ತೆ 60 ದಿನಗಳ ಕಾಲ ವಿಸ್ತರಿಸುವಂತೆ ಕೋರಿದ್ದರು. ಈ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಪೀಠ ಅವಧಿಯನ್ನು ವಿಸ್ತರಣೆ ಮಾಡಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಮತ್ತು ಅಪರಾಧಿ ಆನಂದ್ ವಿವಾಹವಾಗಿರುವ ಸಂಬಂಧ ಪ್ರಮಾಣ ಪತ್ರವನ್ನು ಸಲ್ಲಿಸಿದರು. ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದೆ. ಆದರೆ, ಕೆಲವು ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಮತ್ತೆ 60 ದಿನಗಳ ಕಾಲ ಪೆರೋಲ್ ವಿಸ್ತರಣೆ ಮಾಡಬೇಕು ಎಂದು ಕೋರಿದ್ದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಪೆರೋಲ್ ಅವಧಿ ವಿಸ್ತರಿಸಿದ್ದು, ಮತ್ತೆ ಇದೇ ರೀತಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ಸೂಚನೆ ನೀಡಿದೆ.
ಪ್ರಕರಣವೇನು?: ಸ್ಥಿರಾಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ 2015ರ ಆ.16ರಂದು ಮಾಸ್ತಿ ಹೋಬಳಿಯ ನಾಗದೇನಹಳ್ಳಿಯಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ(ಘಟನೆ ನಡೆದಾಗ 21 ವರ್ಷ) ಅವರನ್ನು ಮಾಸ್ತಿ ಠಾಣೆ ಪೊಲೀಸರು 2015ರ ಆ.17ರಂದು ಬಂಧಿಸಿದ್ದರು. ನಂತರ ಸೆಷನ್ಸ್ ನ್ಯಾಯಾಲಯ 2017ರಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಇದನ್ನು ಪ್ರಶ್ನಿಸಲಾದ ಮೇಲ್ಮನವಿಯಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ನಿಗದಿ ಮಾಡಿತ್ತು. ಈ ನಡುವೆ ಅಪರಾಧಿಯ ಪ್ರಿಯತಮೆ ವಿವಾಹವಾಗಲು 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅದಿಕಾರಿಗಳಿಗೆ ಸೂಚನೆ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದರು.







