ವಿಧಾನಸಭಾ ಚುನಾವಣೆಯ ಅಂಗವಾಗಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

ಉಡುಪಿ: ರಾಜ್ಯ ವಿಧಾನಸಭೆಗೆ ಮೇ ೧೦ರಂದು ನಡೆಯುವ ಸಾರ್ವತ್ರಿಕ ಚುನಾವಣೆಯನ್ನು ಕರ್ನಾಟಕದಲ್ಲಿ ‘ಪ್ರಜಾಪ್ರಭುತ್ವದ ಹಬ್ಬ’ದಂತೆ ಆಚರಿಸಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಹಮ್ಮಿ ಕೊಂಡಂತೆ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ಅಂಗವಾಗಿ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕರಿಗಾಗಿ ಮತದಾನದ ವಿಷಯಗಳ ಬಗ್ಗೆ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಲೋಕಸಭಾ ಚುನಾವಣೆ-2019ರಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಮೂಲಕ ಚುನಾವಣೆಗೆ ಸಂಬಂಧಿಸಿದ ಅತ್ಯುತ್ತಮ ಹಾಗೂ ಸಂಗ್ರಹಯೋಗ್ಯ ಛಾಯಾಚಿತ್ರಗಳನ್ನು ಕೇಂದ್ರ ಚುನಾವಣಾ ಆಯೋಗ ಪ್ರಶಂಸಿದ್ದು, ತನ್ನ ವರದಿ ಹಾಗೂ ಪುಸ್ತಕಗಳ ಮುಖಪುಟಗಳಲ್ಲಿ ಅವುಗಳನ್ನು ಬಳಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ-2023ರ ನಿಮಿತ್ತ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿ ಅತ್ಯುತ್ತಮ ಛಾಯಾಚಿತ್ರ ತೆಗೆದ ಛಾಯಾಗ್ರಾಹಕ ರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಪತ್ರಿಕಾ ಛಾಯಾಗ್ರಾಹಕರು/ ಹವ್ಯಾಸಿ ಛಾಯಾಗ್ರಾಹಕರು ತಾವು ತೆಗೆದ ಗರಿಷ್ಠ ಐದು ಅತ್ಯುತ್ತಮ ಛಾಯಾಚಿತ್ರಗಳನ್ನು ಸೂಕ್ತ ಶೀರ್ಷಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡಿರುವ ಅಕ್ರಿಡಿಟೇಷನ್ ಕಾರ್ಡ್ ಅಥವಾ ತಮ್ಮ ಸಂಸ್ಥೆ ನೀಡಿರುವ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಹಾಗೂ ಮನೆ ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಇತರ ವಿವರಗಳನ್ನು ಇ-ಮೇಲ್ ಐಡಿ - ktkceomedia2023@gmail.com- ಗೆ ಸಲ್ಲಿಸಬೇಕು. ಛಾಯಾಚಿತ್ರಗಳನ್ನು ಮೇ ೨೦ರ ಶನಿವಾರ ಸಂಜೆಯೊಳಗೆ ಈ-ಮೇಲ್ ಮೂಲಕ ಕಳುಹಿಸಬಹುದು.
ವಿಜೇತರಿಗೆ ಪ್ರಥಮ ಬಹುಮಾನ 25000ರೂ. ದ್ವಿತೀಯ ಬಹುಮಾನ 15000ರೂ., ತೃತೀಯ ಬಹುಮಾನ 10000ರೂ., ಸಮಾಧಾನಕರ ಬಹುಮಾನ 6000ರೂ., ವಿಶೇಷ ಬಹುಮಾನ 5000ರೂ. ನೀಡಲಾಗು ವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.