ಕೊಕ್ಕಡದ ಶಾಲೆಯಲ್ಲಿ ಕಳ್ಳತನ ಪ್ರಕರಣ: ಸೊತ್ತು ಸಹಿತ ನಾಲ್ವರು ಆರೋಪಿಗಳ ಬಂಧನ
ದ.ಕ. ಜಿಲ್ಲೆಯ ಒಂಬತ್ತು ಶಾಲೆಗಳಿಗೆ ನುಗ್ಗಿ ಕಳವು

ಬೆಳ್ತಂಗಡಿ: ಕೊಕ್ಕಡದ ಶಾಲೆಯಲ್ಲಿ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದು ಅವರಿಂದ ಕಳ್ಳತನ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಕಡಬ ತಾಲೂಕಿನ ಕುಟ್ರುಪ್ಪಾಡಿ ನಿವಾಸಿ ರಕ್ಷಿತ್ ಡಿ (24), ತೀರ್ಥೇಶ್ ಎಂ(29), ಯಜ್ಞೇಶ್ ಯು.ಕೆ (30) ಹಾಗೂ ರೋಹಿತ್ ಶೆಟ್ಟಿ (23) ಎಂದು ಪೊಲೀಸರು ತಿಳಿಸಿದ್ದಾರೆ.
ಇವರು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸರಕಾರಿ ಪ್ರೌಢಶಾಲೆಯ ಬಾಗಿಲು ಮುರಿದು ಅಲ್ಲಿರಿಸಲಾಗಿದ್ದ ಸುಮಾರು 32 ಸಾವಿರ ರೂ. ಮೌಲ್ಯದ ಎಂಟು ಬ್ಯಾಟರಿಗಳನ್ನು ಕಳವು ಮಾಡಿದ್ದರು.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಂದು ಕಾರು ಹಾಗೂ ವಿವಿದೆಡೆ ಕಳ್ಳತನ ಮಾಡಿದ ಸುಮಾರು ಎರಡು ಲಕ್ಷ ರೂ. ಮೌಲ್ಯದ ಬ್ಯಾಟರಿಗಳನ್ನು ವಶಪಡಿಸಲಾಗಿದ್ದು, ಕಳ್ಳತನಕ್ಕೆ ಉಪಯೋಗಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿರುವುದು ಬಹಿರಂಗಗೊಂಡಿದ್ದು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನಾಲ್ಕು ಶಾಲೆಗಳಿಂದ, ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಎರಡು ಶಾಲೆಗಳಿಂದ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಒಂದು ಶಾಲೆಯಿಂದ, ಬಂಟ್ವಾಳ ಠಾಣಾ ವ್ಯಾಪ್ತಿಯ ಒಂದು ಶಾಲೆಯಿಂದ ಹಾಗೂ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಒಂದು ಶಾಲೆಯಲ್ಲಿ ಹೀಗೆ ಒಂಬತ್ತು ಶಾಲೆಗಳಲ್ಲಿ ಕಳ್ಳತನ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಠಾಣೆಯ ಎಸ್.ಐ ಅನಿಲ್ ಕುಮಾರ್ ಹಾಗೂ ತಂಡ ಇದೀಗ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.







