ಭಾರತದ ಶೇ.39ರಷ್ಟು ಕುಟುಂಬಗಳು ಆನ್‌ಲೈನ್ ಹಣ ವಂಚನೆಯ ಬಲಿಪಶುಗಳು: ವರದಿ

ಹೊಸದಿಲ್ಲಿ, ಮೇ 2: ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಶೇ.39ರಷ್ಟು ಕುಟುಂಬಗಳಿಗೆ ವಿತ್ತೀಯ ವಂಚನೆಯ ಅನುಭವವಾಗಿದ್ದು, ಅವರಲ್ಲಿ ಕೇವಲ 24 ಶೇಕಡ ಮಂದಿ ಮಾತ್ರ ತಮ್ಮ ಹಣವನ್ನು ವಾಪಾಸ್ ಪಡೆಯುವಲ್ಲಿ ಸಫಲರಾಗದ್ದಾರೆ ಎಂದು ‘ಲೋಕಲ್ ಸರ್ಕಲ್’ ಸುದ್ದಿ ಜಾಲತಾಣ ಮಂಗಳವಾರ ವರದಿ ಮಾಡಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ. 23ರಷ್ಟು ಮಂದಿ ತಾವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಂಚನೆಗೊಳಗಾಗಿರುವುದಾಗಿ ತಿಳಿಸಿದ್ದರೆ, ಶೇ.13ರಷ್ಟು ಮಂದಿ ಮಾರಾಟ, ಖರೀದಿ ವ್ಯವಹಾರಗಳಲ್ಲಿ ಮೋಸಹೋಗಿರುವುದಾಗಿ ತಿಳಿಸಿದ್ದಾರೆ.
ಸಮೀಕ್ಷೆಯ ಪ್ರಕಾರ ಶೇ.13ರಷ್ಟು ಮಂದಿ ತಮಗೆ ಪೂರೈಕೆಯಾಗದಂತಹ ಉತ್ಪನ್ನಗಳಿಗಾಗಿ ಹಣತೆತ್ತು ವಂಚನೆಗೊಳಗಾಗಿರುವುದಾಗಿ ತಿಳಿಸಿದ್ದಾರೆ. ಶೇ.10ರಷ್ಟು ಮಂದಿಗೆ ಎಟಿಎಂ ಕಾರ್ಡ್ ವಂಚನೆಯ ಅನುಭವವಾಗಿದ್ದರೆ, ಶೇ.10ರಷ್ಟು ಮಂದಿ ಬ್ಯಾಂಕ್ ಖಾತೆ ವಂಚನೆ ಹಾಗೂ ಶೇ.16ರಷ್ಟು ಮಂದಿ ಇತರ ಆನ್ಲೈನ್ ಹಣಕಾಸು ವಂಚನೆಗೊಳಗಾಗಿರುವುದಾಗಿ ಹೇಳಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.30ರಷ್ಟು ಮಂದಿ, ವಿತ್ತೀಯ ವಂಚನೆಗೊಳಗಾಗಿರುವ ಕುಟುಂಬದ ಓರ್ವ ಸದಸ್ಯನಾಗಿದ್ದರೆ, ಶೇ.9ರಷ್ಟು ಮಂದಿ ತಮ್ಮ ಕುಟುಂಬದ ಹಲವು ಸದಸ್ಯರು ವಿತ್ತೀಯ ವಂಚನೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಉಳಿದ ಶೇ.57ರಷ್ಟು ಮಂದಿ ತಾವು ಅಥವಾ ತಮ್ಮ ಕುಟುಂಬದ ಸದಸ್ಯರು ಇಂತಹ ಅನ್ಲೈನ್ ವಿತ್ತೀಯ ವಂಚನೆಯ ಬಲೆಯಿಂದ ತಪ್ಪಿಸಿಕೊಂಡಿದ್ದಗಿ ಹೇಳಿದ್ದಾರೆ’’ ಎಂದು ಆನ್ಲೈನ್ ಸಮೀಕ್ಷಾ ಸಂಸ್ಥೆ ‘ಲೋಕಲ್ ಸರ್ಕಲ್ಸ್’ ತನ್ನ ವರದಿಯಲ್ಲಿ ತಿಳಿಸಿದೆ.
ಭಾರತದ 331 ಜಿಲ್ಲೆಗಳಲ್ಲಿನ ವಿವಿಧ ಕುಟುಂಬಗಳ 32 ಸಾವಿರ ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಅವರಲ್ಲಿ ಶೇ.66ರಷ್ಟು ಪುರುಷರು ಹಾಗೂ ಶೇ.34ರಷ್ಟು ಮಹಿಳೆಯರು ಎಂದು ವರದಿ ಹೇಳಿದೆ.







