ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ದಶಮಾನೋತ್ಸವ

ಮಂಗಳೂರು: ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ದಶಮಾನೋತ್ಸವ ಸಮಾರಂಭವು ಮಂಗಳವಾರ ಆಸ್ಪತ್ರೆಯ ಆವರಣದಲ್ಲಿ ನೆರವೇರಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಮಾತನಾಡಿ, ಆರೋಗ್ಯ ಸೇವೆಯನ್ನು ಪ್ರಮುಖ ಉದ್ದೇಶವನ್ನಾಗಿಸಿ ಬೆಳೆದು ಬಂದಿರುವ ಫಾದರ್ ಮುಲ್ಲರ್ ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯರು, ಸಿಬ್ಬಂದಿಯ ಸೇವೆ ಅನನ್ಯವಾಗಿದೆ. ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ ನೀಡುವುದಕ್ಕೆ ಆಡಳಿತ ಮಂಡಳಿ ಸೇರಿದಂತೆ ಎಲ್ಲರೂ ಕಠಿಣ ಶ್ರಮಿಸುತ್ತಿದೆ ಎಂದರು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಮಾತನಾಡಿ, ವಿಶೇಷ ವಿನ್ಯಾಸದಿಂದ ಬಿಎ ಗ್ರೂಪ್‌ನವರು ರೂಪಿಸಿದ ಆಸ್ಪತ್ರೆಯನ್ನು ಫಾದರ್ ಮುಲ್ಲರ್ ಸಂಸ್ಥೆಯು ಮುನ್ನಡೆಸಿ ಪ್ರಸ್ತುತ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಗ್ರಾಮೀಣ ಭಾಗದ ಜನತೆಯ ಜತೆಗೆ ಸ್ಥಳೀಯ ಪಂಚಾಯತ್ ಕೂಡ ಉತ್ತಮ ಸಹಕಾರ ನೀಡಿದ ಫಲವಾಗಿ ಆಸ್ಪತ್ರೆ ಬೆಳೆಯಲು ಸಾಧ್ಯವಾಗಿದೆ ಎಂದರು.
ಮೆಡಿಕಲ್ ಕಾಲೇಜು ಡೀನ್ ಡಾ. ಆಂಟನಿ ಸಿಲ್ವಿಯನ್ ಡಿಸೋಜ ಮಾತನಾಡಿ, ಆರೋಗ್ಯ ಕ್ಷೇತ್ರವು ಹಲವು ಸವಾಲುಗಳಿಂದ ಕೂಡಿದ್ದು, ಇಲ್ಲಿನ ನುರಿತ ವೈದ್ಯರು, ದಾದಿಯರು, ತಾಂತ್ರಿಕ ಸಿಬ್ಬಂದಿಯ ಶ್ರಮದಿಂದ ಎಲ್ಲಾ ಸವಾಲು ಗಳನ್ನು ಯಶಸ್ವಿಯಾಗಿ ಈಡೇರಿಸಿದ್ದೇವೆ. ಜತೆಗೆ ಆಡಳಿತ ಮಂಡಳಿಯೂ ಎಲ್ಲಾ ರೀತಿಯ ಸಹಕಾರ ನೀಡಿದೆ ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕಿರಣ್ ಶೆಟ್ಟಿ, ಫಾದರ್ ಮುಲ್ಲರ್ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲೆ ಸಿ.ಧನ್ಯ ದೇವಸ್ಯ ವೇದಿಕೆಯಲ್ಲಿದ್ದರು. ವಂ. ರೋಶನ್ ಕ್ರಾಸ್ತಾ, ವಂ. ಅಜಿತ್ ಮೆನೇಜಸ್, ವಂ. ರುಡಾಲ್ ಡೇಸಾ ಉಪಸ್ಥಿತರಿದ್ದರು.
ವೈದ್ಯಕೀಯ ಅಧೀಕ್ಷಕರು ಸೇರಿದಂತೆ ಆಸ್ಪತ್ರೆಯಲ್ಲಿ ಸುದೀರ್ಘ ಸಮಯ ಕರ್ತವ್ಯ ನಿರ್ವಹಿಸಿದವರನ್ನು ಗೌರವಿಸ ಲಾಗಿದ್ದು, ಸಿಲ್ವಿಯಾ ಲೋಬೊ ಅವರು ವಿವರ ನೀಡಿದರು. ದಶಮಾನೋತ್ಸವ ಸಂಚಿಕೆ ಬಿಡುಗಡೆಗೊಳಿಸ ಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.







