2022ರ ಭಯೋತ್ಪಾದಕ ಸಂಚು ಪ್ರಕರಣ: ಎನ್ಐಎ ನಿಂದ 12 ಸ್ಥಳಗಳ ಮೇಲೆ ದಾಳಿ

ಹೊಸದಿಲ್ಲಿ, ಮೇ 2: ಭಯೋತ್ಪಾದಕ ಹಾಗೂ ವಿಧ್ವಂಸಕ ಚಟುವಟಿಕೆಗಳ ಕುರಿತ ಕ್ರಿಮಿನಲ್ ಸಂಚನ್ನು ಬಯಲಿಗೆಳೆಯಲು, ಕಳೆದ ವರ್ಷ ತಾನು ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ಮಂಗಳವಾರ ಜಮ್ಮುಕಾಶ್ಮೀರದ 12 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ವಿವಿಧ ನಿಷೇಧಿತ ಸಂಘಟನೆಗಳು ಹಾಗೂ ಅವುಗಳಿಗೆ ನಿಷ್ಠೆ ಹೊಂದಿರುವ ಅಥವಾ ಕವಲುಗಳಾಗಿ ಹೊರಹೊಮ್ಮಿರುವ ಗುಂಪುಗಳು, ತಮ್ಮ ಪಾಕಿಸ್ತಾನದ ಕಮಾಂಡರ್ಗಳು ಹಾಗೂ ಸೂತ್ಱಧಾರಿಗಳ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರಾಡಳಿತದ ಭದ್ರತಾ ಸಿಬ್ಬಂದಿ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಮನ್ವಯತೆಯೊಂದಿಗೆ ಶಂಕಿತರು ಹಾಗೂ ನಿಷೇಧಿತ ಸಂಘಟನೆಗಳ ಬೆಂಬಲಿಗರಿಗೆ ಸೇರಿದ ನಿವಾಸಗಳು, ಕಟ್ಟಡಗಳಲ್ಲಿ ಶೋಧ ಕಾರ್ಯಾಚರಣೆನಡೆಸಿತು.
2022ರ ಡಿಸೆಂಬರ್ 23ರಂದು ಕೂಡಾ ಎನ್ಐಎ ಜಮ್ಮುಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಕುಲ್ಗಾಂವ್,ಪುಲ್ವಾಮಾ, ಆನಂತನಾಗ್, ಸೊಪೊರ್ ಹಾಗೂ ಜಮ್ಮು ಜಿಲ್ಲೆಗಳಲ್ಲಿಯೂ ಏಜೆನ್ಸಿ ಶೋಧ ಕಾರ್ಯಾಚರಣೆ ನಡೆಸಿತ್ತು.
ಈ ಗುಂಪುಗಳು, ಜಮ್ಮುಕಾಶ್ಮೀರದಲ್ಲಿ ಸೈಬರ್ ಜಾಲವನ್ನು ಬಳಸಿಕೊಂಡು, ಅಲ್ಪಸಂಖ್ಯಾತರನ್ನು . ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿರಿಸಿ ಭಯೋತ್ಪಾದಕ ದಾಳಿಯನ್ನು ನಡೆಸಿದೆ ಎಂದು ಎನ್ಐಎ ಆರೋಪಿಸಿತ್ತು. ಈ ಸಂಬಂಧ ಅದು 2022ರ ಜೂನ್ 21ರಂದು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.







