ಪತ್ರಕರ್ತರ ಅಂಚೆ ಮತಕ್ಕೆ ಅವಕಾಶ, ಸಮಯ ವಿಸ್ತರಣೆ ಮಾಡುವಂತೆ ಚುನಾವಣಾಧಿಕಾರಿಗೆ ಮನವಿ

ಬೆಂಗಳೂರು, ಮೇ.2: ಅಗತ್ಯ ಸೇವೆಯ ಪ್ರವರ್ಗದ ಅಡಿ ಪತ್ರಕರ್ತರ ಅಂಚೆ ಮತಕ್ಕೆ ಅವಕಾಶ ಮತ್ತು ಸಮಯ ವಿಸ್ತರಣೆ ಮಾಡಬೇಕು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಮನವಿ ಮಾಡಿದ್ದಾರೆ.
ಈ ಕುರಿತು ಮಂಗಳವಾರ ಮನವಿ ಪತ್ರ ನೀಡಿರುವ ಅವರು, ರಾಜ್ಯದಲ್ಲಿ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗವು ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ಅಗತ್ಯ ಸೇವೆಯ ಪ್ರವರ್ಗದ ಅಡಿಯಲ್ಲಿ ಅಂಚೆ ಮತ ಚಲಾಯಿಸಲು ಅವಕಾಶ ಕಲ್ಪಿಸಿದೆ. ಆಯೋಗವು ಈ ಅವಕಾಶದ ಅಡಿಯಲ್ಲಿ ನಮೂನೆ 12ಡಿ ಮೂಲಕ ಪತ್ರಕರ್ತರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಬೆಂಗಳೂರಿನಲ್ಲಿ ಮತ್ತು ಇತರೆ ಕೇಂದ್ರಗಳಲ್ಲಿ ಮತ ಚಲಾವಣೆಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಇನ್ನು ಬೆಂಗಳೂರಿನ ವಾರ್ತಾ ಇಲಾಖೆಯು ಪತ್ರಕರ್ತರ ನಮೂನೆ 12ಡಿ ಅನ್ನು ನಿಗದಿತ ಸಮಯದಲ್ಲಿ ಅವಶ್ಯಕ ದಾಖಲೆಗಳೊಂದಿಗೆ ಪಡೆದುಕೊಂಡಿದೆ. ಆದರೆ ಕೆಲ ಅಧಿಕಾರಿಗಳು ನಿಗದಿತ ಸಮಯದಲ್ಲಿ ಸದರಿ ನಮೂನೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಪತ್ರಕರ್ತರು ನಿಗದಿತ ಸಮಯದಲ್ಲಿ ತಮ್ಮ ದಾಖಲೆಗಳೊಂದಿಗೆ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳ ತಪ್ಪಿನಿಂದ ಅದು ಚುನಾವಣಾ ಮುಖ್ಯಾಧಿಕಾರಿಗಳಿಗೆ ತಲುಪಿರುವುದಿಲ್ಲ.
ಆ ಕಾರಣ ಆಯೋಗವು ಕೂಡಲೇ ಸಂಬಂಧಪಟ್ಟ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಮತ್ತು ಬಿಬಿಎಂಪಿ ವ್ಯಾಪ್ತಿಯ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಗತ್ಯ ಸೇವೆಗಳ ಪ್ರವರ್ಗದ ಅಡಿಯಲ್ಲಿ ನಮೂನೆ 12ಡಿ ಸಲ್ಲಿಕೆ ಮಾಡಿರುವ ಪತ್ರಕರ್ತರ ಅರ್ಜಿಗಳನ್ನು ಪರಿಗಣಿಸಿ ಅಂಚೆ ಮತ ಚಲಾವಣೆ ಮಾಡಲು ಅವಕಾಶ ನೀಡಬೇಕು ಎಂದು ರಮೇಶ್ ಬಾಬು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.







