ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸುಳ್ಳಿನ ಕಂತೆ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

ಮಂಗಳೂರು: ಕರ್ನಾಟಕದಲ್ಲಿ ಬಿಜೆಪಿಯು ಪ್ರಕಟಿಸಿರುವ ಚುನಾವಣಾ ಪ್ರಣಾಳಿಕೆಯು ಸುಳ್ಳಿನ ಕಂತೆಯಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ತಾನು ನೀಡಿರುವ ಭರವಸೆಗಳನ್ನು ಎಂದಿಗೂ ಈಡೇರಿಸಿಲ್ಲ ಬಿಜೆಪಿ ಕೇವಲ ಭರವಸೆ ನೀಡುತ್ತದೆ. ಒಂದನ್ನು ಈಡೇರಿಸುವುದಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಅವರ ಮೇಲೆ ವಿಶ್ವಾಸವಿಲ್ಲ. ನಾವು ನಮ್ಮ ಭರವಸೆಗಳನ್ನು ಈಡೇರಿಸುತ್ತೇವೆ ಮತ್ತು ಇಂದು ರಾಜಸ್ಥಾನವು ಚಿರಂಜೀವಿ ಯೋಜನೆಯಡಿಯಲ್ಲಿ ಪ್ರತಿ ಕುಟುಂಬವು 25 ಲಕ್ಷ ಆರೋಗ್ಯ ವಿಮೆಯನ್ನು ಹೊಂದಿರುವ ಮಾದರಿ ರಾಜ್ಯವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಘೋಷಿಸಿರುವ ಜನಪರವಾದ ಗ್ಯಾರಂಟಿ ಯೋಜನೆಗಳು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ರಾಜಸ್ಥಾನದಲ್ಲಿ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಶೇ 85ರಷ್ಟು ಭರವಸೆಗಳನ್ನು ಈಗಾಗಲೇ ಈಡೇರಿಸಿದೆ. ಯಾವುದೇ ತೆರಿಗೆ ಹೆಚ್ಚಳ ಮಾಡದೆ ಬಜೆಟ್ ಭರವಸೆಯನ್ನು 95 ಪರ್ಸೆಂಟ್ ಈಡೇರಿಸಿದ್ದೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಭ್ರಷ್ಟ ಬಿಜೆಪಿ ಸರಕಾರ ಎಲ್ಲ ರಂಗಳಲ್ಲೂ ವಿಫಲವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಂದು ಪಕ್ಷ ರಾಜ್ಯದಲ್ಲಿ ಚುನಾವಣೆಯಲ್ಲಿ ಗೆದ್ದರೆ ಅದರ ಸಂದೇಶ ಇಡೀ ದೇಶಕ್ಕೆ ಹೋಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಐಸಿಸಿ ವೀಕ್ಷಕರಾದ ಡಾ. ಅಜಯ್ ಕುಮಾರ್ ಮತ್ತು ಚರಣ್ ಸಿಂಗ್ ಸಪ್ರಾ, ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ರಾಜಸ್ಥಾನದ ರಾಜ್ಯಸಭಾ ಸದಸ್ಯ ನೀರಜ್ ಡಾಂಗಿ, ಮಾಜಿ ಶಾಸಕ ಜೆ.ಆರ್. ಲೋಬೊ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪಕ್ಷದ ಧುರೀಣರಾದ ಜಿ.ಎ. ಬಾವಾ, ಸುರೇಶ್ ಬಳ್ಳಾಲ್ ಉಪಸ್ಥಿತರಿದ್ದರು.
