ರಾಷ್ಟ್ರಮಟ್ಟದ 'ಅಡಿಕೆ ಮಂಡಳಿ' ಸ್ಥಾಪನೆಗೆ ಪ್ರಕಾಶ್ ಕಮ್ಮರಡಿ ಒತ್ತಾಯ

ಬೆಂಗಳೂರು, ಮೇ 2: ‘ಕಾಫಿ, ಟೀ, ರಬ್ಬರ್ ಸೇರಿ ಇತರೆ ಬೆಳೆಗಳಿಗೆ ಇರುವ ಹಾಗೆಯೇ ರಾಷ್ಟ್ರ ಮಟ್ಟದಲ್ಲೇ ಸಮರ್ಥ ಮತ್ತು ಸದೃಢ ಅಡಿಕೆ ಮಂಡಳಿಯ ರಚನೆಗೆ ಮುಂದಾಗಬೇಕು’ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಎನ್.ಪ್ರಕಾಶ್ ಕಮ್ಮರೆಡಿ ಆಗ್ರಹಿಸಿದ್ದಾರೆ.
ಮಂಗಳವಾರ ಪ್ರಕಟನೆ ಹೊರಡಿಸಿರುವ ಅವರು, ‘ರಾಜ್ಯದ ವಾಣಿಜ್ಯ ಬೆಳೆಯಾದ ಅಡಿಕೆಗೆ ರೋಗ ರುಜಿನಗಳ ಬಾಧೆ, ಇದರ ಸೇವೆಯನ್ನೇ ನಿಷೇಧಿಸುವ ಕಾನೂನಿನ ಭಯ ಜೊತೆಗೆ ಹೊರದೇಶಗಳಿಂದ ಅನಗತ್ಯ ಆಮದಿನ ಆತಂಕ ಹೀಗೆ ಹಲವು ಸಮಸ್ಯೆಗಳು ವರ್ಷಾನುಗಟ್ಟಲೆಯಿಂದ ಬಾಧಿಸುತ್ತಿದ್ದು, ಬೆಳೆಗಾರರಿಗೆ ನೆಮ್ಮದಿ ಇಲ್ಲದಾಗಿದೆ’ ಎಂದು ಹೇಳಿದಿದ್ದಾರೆ.
‘ಅಡಿಕೆ ಬೆಳೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ‘ಕರ್ನಾಟಕ ಕೃಷಿ ಬೆಲೆ ಆಯೋಗ’ 2018ರಲ್ಲಿ ಬಾಗಲಕೋಟೆ ‘ತೋಟಗಾರಿಕಾ ವಿವಿ ಕುಲಪತಿ’ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿ ಆ ಸಮಿತಿಯ ವರದಿಯ ಆಧಾರದಲ್ಲಿ ಕಾಫಿ, ಚಹಾ, ರಬ್ಬರ್ ಬೆಳೆಗಳಿಗೆ ಇರುವ ಹಾಗೆ ಅಡಿಕೆಗೂ ರಾಷ್ಟ್ರಮಟ್ಟದಲ್ಲಿ ಒಂದು ಪ್ರತ್ಯೇಕ ಮಂಡಳಿ ಸ್ಥಾಪಿಸುವ ಶಿಫಾರಸ್ಸು ಮಾಡಿರುತ್ತದೆ. ಈ ಬಗ್ಗೆ ಭಾರತೀಯ ತೋಟದ ಬೆಳೆಗಳ ನಿರ್ವಹಣಾ ಸಂಸ್ಥೆಯಿಂದ ಸಾಧಕ-ಬಾದಕಗಳ ಟಿಪ್ಪಣಿಯನ್ನೂ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಿಜೆಪಿ ಹೊರತಂದಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಅಡಿಕೆಗೆ ರಾಜ್ಯಮಟ್ಟದ ಮಂಡಳಿಯನ್ನು ಸ್ಥಾಪಿಸುವ ಭರವಸೆ ನೀಡಲಾಗಿದೆ. ಈಗಾಗಲೇ ರಾಜ್ಯದ ವ್ಯಾಪ್ತಿಯಲ್ಲಿ ಕೆಲವು ಬೆಳೆಗಳಿರುವ ದುರ್ಬಲ ಮಂಡಳಿಗಳಿಂದ ರೈತರಿಗರ ಏನು ಪರಿಹಾರ ಸಿಕ್ಕಿಲ್ಲ. ಇನ್ನು ರಾಜ್ಯದ ವ್ಯಾಪ್ತಿಯ ಮಂಡಳಿಯ ಮೂಲಕ ಸಮಗ್ರ ಸಂಶೋಧನೆ, ರೋಗ ರುಜಿನ ಪರಿಹಾರವೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.