ಸುಡಾನ್ ಸಂಘರ್ಷದಿಂದ ಮಾನವೀಯ ಬಿಕ್ಕಟ್ಟು: ವಿಶ್ವಸಂಸ್ಥೆ

ಖಾರ್ಟಮ್, ಮೇ 2: ಸುಡಾನ್ ನಲ್ಲಿ ನಡೆಯುತ್ತಿರುವ ಸಂಘರ್ಷವು ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದ್ದು ಈಗಾಗಲೇ 1 ಲಕ್ಷಕ್ಕೂ ಅಧಿಕ ಜನರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಈ ಮಧ್ಯೆ, ಸೇನಾಪಡೆ ಹಾಗೂ ಅರೆಸೇನಾ ಪಡೆಯ ಮಧ್ಯೆ ಕದನವಿರಾಮ ವಿಸ್ತರಣೆಗೊಂಡಿದ್ದರೂ ಗುಂಡಿನ ದಾಳಿ ಮುಂದುವರಿದಿದೆ.
ಸುಡಾನ್ನ ಬಡ ನೆರೆಹೊರೆ ದೇಶಗಳಿಗೆ ಈಗ ನಿರಾಶ್ರಿತರ ವಲಸೆ ಬಿಕ್ಕಟ್ಟಿನ ಸಮಸ್ಯೆ ಎದುರಾಗಿದೆ. ಸುಡಾನ್ ನಲ್ಲಿ 75%ದಷ್ಟು ಮಂದಿ ಹೊರಗಿನವರ ನೆರವನ್ನು ಎದುರು ನೋಡುತ್ತಿದ್ದಾರೆ. ಆದರೆ ಆ ದೇಶದಲ್ಲಿನ ಪರಿಸ್ಥಿತಿ ಮಾನವೀಯ ನೆರವು ವಿತರಣೆಗೆ ಅಡ್ಡಿಯಾಗುತ್ತಿದೆ. ಈ ಮಧ್ಯೆ, ಸುಡಾನ್ನ ಸಂಘರ್ಷ ಪೀಡಿತ ಪ್ರದೇಶದಲ್ಲಿ ಅಗತ್ಯ ನೆರವು ತಲುಪಿಸುವ ಕಾರ್ಯಕ್ಕೆ ಮತ್ತೆ ಚಾಲನೆ ದೊರಕಿದೆ ಎಂದು ವಿಶ್ವಸಂಸ್ಥೆ ನೆರವು ವಿತರಣಾ ಘಟಕದ ಅಧ್ಯಕ್ಷ ಮಾರ್ಟಿನ್ ಗ್ರಿಫಿತ್ಸ್ ಹೇಳಿದ್ದಾರೆ. ಇದು ಕೇವಲ ಸುಡಾನ್ ನ ಬಿಕ್ಕಟ್ಟು ಆಗಿ ಉಳಿಯದೆ, ಪ್ರಾದೇಶಿಕ ಬಿಕ್ಕಟ್ಟು ಆಗಿ ಮುಂದುವರಿಯುವ ಅಪಾಯವಿದೆ ಎಂದವರು ಹೇಳಿದ್ದಾರೆ.