ಗಲ್ಲುಶಿಕ್ಷೆ ವಿಧಾನದ ಬಗ್ಗೆ ಪರಿಶೀಲನೆಗೆ ಸಮಿತಿ ರಚನೆ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ಹೊಸದಿಲ್ಲಿ, ಮೇ 2: ದೇಶದಲ್ಲಿ ಮರಣದಂಡನೆಗೆ ಗುರಿಯಾದ ದೋಷಿಯನ್ನು ನೇಣಿಗೇರಿಸುವ ಚಾಲ್ತಿಯಲ್ಲಿರುವ ಮಾದರಿಯ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲ ಅವರನ್ನು ಒಳಗೊಂಡ ಪೀಠ ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಸಲ್ಲಿಸಿದ ವರದಿಯನ್ನು ಗಮನಿಸಿತು. ತಜ್ಞರ ಸಮಿತಿ ರಚಿಸುವ ಸಲಹೆಯನ್ನು ಸರಕಾರ ಪರಿಗಣಿಸುತ್ತಿದೆ ಎಂದು ಅವರು ಹೇಳಿದರು.
ಪ್ರಸ್ತಾವಿತ ಸಮಿತಿಗೆ ಹೆಸರನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ತಾನು ಸ್ಪಲ್ಪ ಸಮಯದ ಬಳಿಕ ಈ ಕುರಿತು ಪ್ರತಿಕ್ರಿಯಿಸಲು ಸಾಧ್ಯವಾಗಬಹುದು ಎಂದು ಅವರು ತಿಳಿಸಿದರು.
ಇದಕ್ಕೆ ನ್ಯಾಯಪೀಠ, ‘‘ಸಮಿತಿಯ ನಿಯೋಜನೆ ಪ್ರಕ್ರಿಯ ಪರಿಶೀಲನೆಯಲ್ಲಿದೆ ಎಂದು ಅಟಾರ್ನಿ ಜನರಲ್ ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ರಜಾ ಕಾಲದ ಅವಧಿಯ ಬಳಿಕ ನಿಗದಿತ ದಿನಾಂಕ ನೀಡುತ್ತೇವೆ’’ ಎಂದು ಪೀಠ ಹೇಳಿತು.





