ಕರ್ನಾಟಕ ಸಿಎಂ ಹುದ್ದೆಗೆ ಸಿದ್ದರಾಮಯ್ಯ ಫೇವರಿಟ್: ಎನ್‌ಡಿಟಿವಿ ಸಮೀಕ್ಷೆ

ಹೊಸದಿಲ್ಲಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗುವ ಸಂಭಾವ್ಯ ನಾಯಕರ ಪೈಕಿ ಸಿದ್ದರಾಮಯ್ಯ ಅತ್ಯಧಿಕ ಜನಪ್ರಿಯತೆ ಹೊಂದಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ ಎಂದು ಎನ್‌ಡಿಟಿವಿ ಪ್ರಕಟಿಸಿದೆ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಎರಡನೇ ಸ್ಥಾನದಲ್ಲಿದ್ದಾರೆ. ಲೋಕನೀತಿ ಸೆಂಟರ್ ಫಾರ್ ದ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಹಯೋಗದಲ್ಲಿ ಎನ್‌ಡಿಟಿವಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಮೇ 10ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಹಲವು ವಿಷಯಗಳನ್ನು ಆಧರಿಸಿ ರಾಜ್ಯದ ಸಾರ್ವಜನಿಕರ ಅಭಿಪ್ರಾಯಗಳನ್ನು ಅಳೆಯುವ ಉದ್ದೇಶದಿಂದ ಈ ಸಮೀಕ್ಷೆ ಕೈಗೊಳ್ಳಲಾಗಿತ್ತು. ಹಿರಿಯ ಮತದಾರರ ಪೈಕಿ ಸಿದ್ದರಾಮಯ್ಯ , ಬೊಮ್ಮಾಯಿಯವರಿಗಿಂತ ಹೆಚ್ಚು ಜನಪ್ರಿಯರಾಗಿದ್ದರೆ, ಬೊಮ್ಮಾಯಿ ಯುವ ಮತದಾರರ ಅಧಿಕ ಒಲವನ್ನು ಗಳಿಸಿಕೊಂಡಿರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಜಾತ್ಯತೀತ ಜನತಾದಳದ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಲ್ಕು ಬಾರಿ ಸಿಎಂ ಹುದ್ದೆ ಅಲಂಕರಿಸಿದ್ದ ಬಿಜೆಪಿಯ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ 5ನೇ ಸ್ಥಾನದಲ್ಲಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡ 56ರಷ್ಟು ಮಂದಿ ಮತ ಹಾಕುವ ವೇಳೆ ಅಭ್ಯರ್ಥಿಗಿಂತ ಪಕ್ಷ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದರೆ, ಶೇಕಡ 38ರಷ್ಟು ಮಂದಿ ಅಭ್ಯರ್ಥಿಯೇ ಮುಖ್ಯ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾದ ವ್ಯಕ್ತಿಗಳ ಆಧಾರದಲ್ಲಿ ಮತ ಹಾಕುವುದಾಗಿ ಕೇವಲ ಶೇಕಡ 4ರಷ್ಟು ಮಂದಿ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಹೇಳಿರುವವರಲ್ಲಿ ಬಹುತೇಕ ಮಂದಿ ಪಕ್ಷವನ್ನು ಪ್ರಮುಖ ಎಂದು ಪರಿಗಣಿಸಿದ್ದರೆ, ಬಿಜೆಪಿ ಬೆಂಬಲಿಗರು ಈ ವಿಚಾರದಲ್ಲಿ ವಿಭಜನೆಯಾಗಿದ್ದಾರೆ. ಪ್ರಮುಖ ಮ್ಯಾಟ್ರಿಕ್‌ಗಳಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ಮುಂದಿದೆ ಎನ್ನುವುದು ಸಮೀಕ್ಷೆಯಿಂದ ದೃಢಪಟ್ಟಿದೆ.
ಬಿಜೆಪಿ ಹೆಚ್ಚು ಭ್ರಷ್ಟ ಎಂದು ಶೇಕಡ 59ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರೆ, ಕಾಂಗ್ರೆಸ್ (ಶೇಕಡ 35) ಹಾಗೂ ಜೆಡಿಎಸ್ (3) ನಂತರದ ಸ್ಥಾನಗಳಲ್ಲಿವೆ. ಅಂತೆಯೇ ವಂಶ ಪಾರಂಪರ‌್ಯ ರಾಜಕಾರಣದ ಬಗ್ಗೆ ರಾಷ್ಟ್ರದಲ್ಲಿ ಚರ್ಚೆ ನಡೆಯುತ್ತಿರುವ ನಡುವೆ, ಬಿಜೆಪಿ ಹೆಚ್ಚು ಸ್ವಜನ ಪಕ್ಷಪಾತಿ ಎಂದು ಶೇಕಡ 59ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಹೆಚ್ಚು ಸ್ವಜನ ಪಕ್ಷಪಾತಿ ಎಂದು ಕ್ರಮವಾಗಿ ಶೇಕಡ 30 ಹಾಗೂ ಶೇಕಡ 8ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.







