ಕ್ರಿಕೆಟಿಗ ಮುಹಮ್ಮದ್ ಶಮಿಯನ್ನು ಬಂಧಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋದ ಪತ್ನಿ
ಹೊಸದಿಲ್ಲಿ: ಭಾರತೀಯ ತಂಡದ ಆಟಗಾರ ಮುಹಮ್ಮದ್ ಶಮಿ ಅವರಿಗೆ ಸ್ಥಳೀಯ ನ್ಯಾಯಾಲಯವೊಂದು ಹೊರಡಿಸಿದ್ದ ಬಂಧನದ ವಾರಂಟ್‌ಗೆ ತಡೆ ನೀಡಿದ್ದ ಆದೇಶವನ್ನು ಹಿಂಪಡೆಯಬೇಕು ಎಂಬ ಅವರ ಪತ್ನಿಯ ಅರ್ಜಿಯನ್ನು ಕೋಲ್ಕತ್ತಾ ಹೈಕೋರ್ಟ್ ವಜಾಗೊಳಿಸಿದ್ದು, ಅವರು ಮಂಗಳವಾರ ಈ ಆದೇಶವನ್ನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ ಎಂದು ndtv.com ವರದಿ ಮಾಡಿದೆ.
ಸೆಷನ್ ಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಬೇಕು ಎಂಬ ಮುಹಮ್ಮದ್ ಶಮಿ ಅವರ ಪತ್ನಿಯ ಮನವಿಯನ್ನು ಮಾರ್ಚ್ 28, 2023ರಂದು ಕೋಲ್ಕತ್ತಾ ಹೈಕೋರ್ಟ್ ವಜಾಗೊಳಿಸಿತ್ತು.
ಮುಹಮ್ಮದ್ ಶಮಿ ವಿರುದ್ಧದ ಬಂಧನದ ವಾರಂಟ್‌ಗೆ ಕೋಲ್ಕತ್ತಾದ ಸೆಷನ್ಸ್ ನ್ಯಾಯಾಲಯ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಶಮಿ ಪತ್ನಿಯು ಕೋಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಆಕೆಯೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈ ತೀರ್ಪು ಕಾನೂನಾತ್ಮಕವಾಗಿ ದೋಷಪೂರಿತವಾಗಿದ್ದು, ತನ್ನ ಕ್ಷಿಪ್ರ ವಿಚಾರಣೆಯ ಹಕ್ಕಿನ ನಿರ್ದಾಕ್ಷಿಣ್ಯ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ. ಅಲ್ಲದೆ ಕಾನೂನಿನಡಿ ತಾರೆಗಳಿಗೆ ಯಾವುದೇ ವಿಶೇಷ ಉಪಚಾರ ನೀಡಬಾರದು ಎಂದೂ ಮನವಿ ಮಾಡಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಕಳೆದ ನಾಲ್ಕು ವರ್ಷಗಳಿಂದ ವಿಚಾರಣೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಮತ್ತು ವಿಚಾರಣೆಗೆ ತಡೆ ನೀಡಲಾಗಿದೆ ಎಂದೂ ದೂರಿದ್ದಾರೆ.