ಅಶಿಸ್ತು ಹೇಳಿಕೆಯ ಬೆನ್ನಿಗೇ ಪ್ರತಿಭಟನಾನಿರತ ಕುಸ್ತಿ ಪಟುಗಳನ್ನು ಭೇಟಿ ಮಾಡಿದ ಪಿ.ಟಿ.ಉಷಾ
ಹೊಸ ದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬೃಜ್ ಭೂಷಣ್ ವಿರುದ್ಧ ನಡೆಯುತ್ತಿರುವ #Metoo ಪ್ರತಿಭಟನೆಯನ್ನು ಟೀಕಿಸಿದ ಕೆಲವೇ ದಿನಗಳ ಅಂತರದಲ್ಲಿ ಜಂತರ್ ಮಂತರ್ ಬಳಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿ ಪಟುಗಳನ್ನು ಭಾರತೀಯ ಒಲಿಂಪಿಕ್ ಒಕ್ಕೂಟದ ಮುಖ್ಯಸ್ಥೆ ಪಿ.ಟಿ.ಉಷಾ ಭೇಟಿ ಮಾಡಿದ್ದಾರೆ ಎಂದು ndtv.com ವರದಿ ಮಾಡಿದೆ.
ಇದಕ್ಕೂ ಮುನ್ನ, ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ಸಮಿತಿಯು ವರದಿ ನೀಡುವುದಕ್ಕೂ ಮುನ್ನ ಸಾರ್ವಜನಿಕ ಪ್ರತಿಭಟನೆಗಿಳಿದಿರುವ ಕುಸ್ತಿ ಪಟುಗಳ ಕ್ರಮವನ್ನು 'ಅಶಿಸ್ತು' ಎಂದು ಪಿ.ಟಿ.ಉಷಾ ಟೀಕಿಸಿದ್ದರು.
ಪಿ.ಟಿ.ಉಷಾರ ಈ ಹೇಳಿಕೆಯನ್ನು ಪ್ರತಿಭಟನಾನಿರತ ಕುಸ್ತಿ ಪಟುಗಳು ತೀವ್ರವಾಗಿ ವಿರೋಧಿಸಿದ್ದರು. ಅವರ ನೆರವಿಗಾಗಿ ಎದುರು ನೋಡುತ್ತಿದ್ದ ನಮಗೆ ಅವರ ಹೇಳಿಕೆಯಿಂದ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬೃಜ್ ಭೂಷಣ್ ವಿರುದ್ಧ ಭಾರತೀಯ ಕುಸ್ತಿ ಪಟುಗಳು ರಾಷ್ಟ್ರ ರಾಜಧಾನಿ ದಿಲ್ಲಿಯ ಜಂತರ್ ಮಂತರ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.