ಕಾರ್ಮಿಕರ ಸ್ವರಾಜ್ಯದ ಕನಸು ಕಂಡಿದ್ದ ಅಂಬೇಡ್ಕರ್

‘‘ಕಾರ್ಮಿಕರ ಕಡು ವಿರೋಧಿಗಳು ರಾಷ್ಟ್ರೀಯವಾದಿಗಳು. ರಾಷ್ಟ್ರೀಯತೆಯನ್ನು ಕುರಿತು ಕಾರ್ಮಿಕರ ಮನೋಧರ್ಮ ಅತ್ಯಂತ ಸ್ಪಷ್ಟವಾಗಿದೆ. ರಾಷ್ಟ್ರೀಯತೆಯನ್ನು ಒಂದು ಅಂಧಶ್ರದ್ಧೆಯನ್ನಾಗಿ ಸ್ವೀಕರಿಸಲು ಕಾರ್ಮಿಕರು ಸಿದ್ಧರಿಲ್ಲ. ಗತಕಾಲವನ್ನು ಆರಾಧಿಸುವುದಷ್ಟೇ ರಾಷ್ಟ್ರಭಕ್ತಿಯಾಗುವುದಾದರೆ, ಮೂಲದಲ್ಲಿ, ಬಣ್ಣದಲ್ಲಿ ದೇಶೀಯವಲ್ಲದ ಸಮಸ್ತವನ್ನೂ ತಿರಸ್ಕರಿಸುವುದೇ ರಾಷ್ಟ್ರೀಯತೆಯಾಗುವುದಾದರೆ, ಕಾರ್ಮಿಕ ವರ್ಗವು ಆ ರಾಷ್ಟ್ರೀಯತೆಯನ್ನು ತನ್ನ ಪಂಥವೆಂದು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ಮೃತರ ಬಗ್ಗೆ ಜೀವಂತ ಶ್ರದ್ಧೆಯನ್ನು, ಜೀವಂತವಾಗಿರುವವರ ಬಗ್ಗೆ ಮೃತ ಶ್ರದ್ಧೆಯಾಗಲು ಕಾರ್ಮಿಕರು ಬಿಡುವುದಿಲ್ಲ’’
-ಡಾ.ಬಿ.ಆರ್. ಅಂಬೇಡ್ಕರ್
ಕಳೆದ ಒಂದೆರಡು ದಶಕಗಳಿಂದ ಮೇ ಒಂದರ ಕಾರ್ಮಿಕ ದಿನದಂದು ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ಮುಖ್ಯವಾಗಿ ಅಂಬೇಡ್ಕರ್ ಕಾರ್ಮಿಕ ಮಂತ್ರಿಯಾಗಿದ್ದಾಗ ಕೈಗೊಂಡ ಕಾಯ್ದೆ ಕಾನೂನುಗಳ ಚರ್ಚೆ ಮುಖ್ಯವಾಗಿರುತ್ತವೆ. ಆದರೆ ಅಂಬೇಡ್ಕರ್ ಅವರು ಕನಸಿದ ‘ಕಾರ್ಮಿಕ’ಪರಿಕಲ್ಪನೆಗೆ ಬಹಳ ವಿಸ್ತಾರವಾದ ರಾಜಕೀಯ ನೆಲೆ ಇದೆ. ಕಾರ್ಮಿಕರನ್ನು ಪರಿಭಾವಿಸುವ ಬಾಬಾ ಸಾಹೇಬರ ಕ್ರಮ ವರ್ಗದ ನೆಲೆಯದು. ವರ್ಗನೆಲೆಯ ಕಾರ್ಮಿಕ ಪರಿಕಲ್ಪನೆಯನ್ನು ಭಾರತದಂತಹ ‘ಜಾತಿ’ ನೆಲೆಯ ಶ್ರಮವಿಭಜನೆಯ ದೇಶದಲ್ಲಿ ಮರು ಕಟ್ಟಲೆತ್ನಿಸಿದ್ದು ಬಹಳ ಅಪರೂಪದ ವಿದ್ಯಮಾನ.
ಭಾರತದ ಜಾತಿವ್ಯವಸ್ಥೆಯ ಬೇರುಗಳನ್ನು ಶೋಧಿಸುವಾಗ ಹಿಂದೂ ಸನಾತನ ಧರ್ಮ ಕಾರ್ಮಿಕ ಅಥವಾ ದಾಸರನ್ನು ಹೇಗೆ ನೋಡುತ್ತಿತ್ತು ಎಂದು ವಿವರಿಸುತ್ತಾರೆ. ಒಬ್ಬ ಕಾರ್ಮಿಕ ಅಥವಾ ಸೇವಕ ಬ್ರಾಹ್ಮಣ ಹೆಣ್ಣಿನೊಂದಿಗೆ ಸಂಪರ್ಕ ಇಟ್ಟುಕೊಂಡರೆ ಪುರುಷಾಂಗವನ್ನು ಒಳಗೊಂಡಂತೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ, ಅಂತೆಯೇ ದಾಸ ಅಥವಾ ಕಾರ್ಮಿಕನು ಪುರೋಹಿತನನ್ನು ಅಪಮಾನ ಗೊಳಿಸಿದರೆ ಕೊರಡೆ ಏಟು ಬಾರಿಸಬೇಕು (ಸಂ:3/32) ಎಂದು ಮನು ಹೇಳಿದ್ದಾನೆ.
ಇದನ್ನು ವಿವರಿಸುವ ಅಂಬೇಡ್ಕರ್ ಅವರು ‘‘ನಾವು ಈಗಿನ ಕಾಲದಲ್ಲಿ ಕಾರ್ಮಿಕ ಸರ್ವಾಧಿಕಾರವಿರುವ ಸ್ವರಾಜ್ಯದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಬ್ರಾಹ್ಮಣರ ಮನುವಾದಿ ಮನ್ವಂತರದ ಸಿದ್ಧಾಂತವು ಆ ಕಾರ್ಮಿಕ ಸರ್ವಾಧಿಕಾರಕ್ಕೆ ವಿರುದ್ಧವಾದ ಪರಿಕಲ್ಪನೆಯಾಗಿದೆ. ಕಾರ್ಮಿಕ ವರ್ಗದ ಮೇಲೆ ಸ್ವರ್ಗೀಯ ಪಿತೃಗಳ ಸರ್ವಾಧಿಕಾರದ ಸಿದ್ಧಾಂತವಿದು’’(ಸಂ:3/735) ಎನ್ನುತ್ತಾ ಕಾರ್ಮಿಕರ ಸ್ವಾತಂತ್ರ್ಯಕ್ಕೂ ಬ್ರಾಹ್ಮಣಶಾಹಿ ಹಿಂದುತ್ವದ ತತ್ವಕ್ಕೂ ಇರುವ ಅಂತರ್ ಸಂಬಂಧವನ್ನು ಹೋಲಿಸುತ್ತಾರೆ.
ಕಾರ್ಮಿಕರು ರಾಷ್ಟ್ರವಾದಿಗಳಲ್ಲ ಅವರು ಅಂತರ್ರಾಷ್ಟ್ರೀಯ ವಾದಿಗಳು ಎನ್ನುವುದು ಅಂಬೇಡ್ಕರರ ಮತ್ತೊಂದು ಮುಖ್ಯ ನೆಲೆ. ಹಾಗಾಗಿಯೇ ರಾಷ್ಟ್ರೀಯವಾದಿಗಳಿಗೆ ‘ಕಾರ್ಮಿಕ’ರೆಂದರೆ ಆಗದು. ಧಾರ್ಮಿಕ ಮೂಲಭೂತವಾದಿಗಳು ಯಾಕೆ ಕಾರ್ಮಿಕರನ್ನು ವಿರೋಧಿಸುತ್ತಾರೆ ಎನ್ನುವುದನ್ನು ಅಂಬೇಡ್ಕರ್ ವಿವರಿಸುತ್ತಾರೆ. ‘‘ಕಾರ್ಮಿಕರ ಕಡು ವಿರೋಧಿಗಳು ರಾಷ್ಟ್ರೀಯವಾದಿಗಳು. ರಾಷ್ಟ್ರೀಯತೆಯನ್ನು ಕುರಿತು ಕಾರ್ಮಿಕರ ಮನೋಧರ್ಮ ಅತ್ಯಂತ ಸ್ಪಷ್ಟವಾಗಿದೆ. ರಾಷ್ಟ್ರೀಯತೆಯನ್ನು ಒಂದು ಅಂಧಶ್ರದ್ಧೆಯನ್ನಾಗಿ ಸ್ವೀಕರಿಸಲು ಕಾರ್ಮಿಕರು ಸಿದ್ಧರಿಲ್ಲ.
ಗತಕಾಲವನ್ನು ಆರಾಧಿಸುವುದಷ್ಟೇ ರಾಷ್ಟ್ರಭಕ್ತಿಯಾಗುವುದಾದರೆ, ಮೂಲದಲ್ಲಿ, ಬಣ್ಣದಲ್ಲಿ ದೇಶೀಯವಲ್ಲದ ಸಮಸ್ತವನ್ನೂ ತಿರಸ್ಕರಿಸುವುದೇ ರಾಷ್ಟ್ರೀಯತೆಯಾಗುವುದಾದರೆ, ಕಾರ್ಮಿಕ ವರ್ಗವು ಆ ರಾಷ್ಟ್ರೀಯತೆಯನ್ನು ತನ್ನ ಪಂಥವೆಂದು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ಮೃತರ ಬಗ್ಗೆ ಜೀವಂತ ಶ್ರದ್ಧೆಯನ್ನು, ಜೀವಂತವಾಗಿರುವವರ ಬಗ್ಗೆ ಮೃತ ಶ್ರದ್ಧೆಯಾಗಲು ಕಾರ್ಮಿಕರು ಬಿಡುವುದಿಲ್ಲ’’ (ಸಂ:8/34) ಎನ್ನುತ್ತಾರೆ. ಇದೊಂದು ಮುಖ್ಯ ನಿಲುವಾಗಿದೆ.
ಬಾಬಾ ಸಾಹೇಬರು ಕಾರ್ಮಿಕರ ಸ್ವಾತಂತ್ರ್ಯದ ಕಲ್ಪನೆ ತುಂಬಾ ಇತ್ಯಾತ್ಮಕವಾದದ್ದು ಎಂದು ವಿಶ್ಲೇಷಿಸುತ್ತಾ, ಅದು ಜನತೆಯ ಸರಕಾರದ ಕಲ್ಪನೆಯನ್ನು ಒಳಗೊಳ್ಳುತ್ತದೆ. ಕಾರ್ಮಿಕರ ಅಭಿಪ್ರಾಯದಲ್ಲಿ ಪ್ರಜಾ ಸರಕಾರವೆಂದರೆ ಸಂಸದೀಯ ಪ್ರಜಾಪ್ರಭುತ್ವ ಅಲ್ಲ. ಸಂಸದೀಯ ಪ್ರಜಾಪ್ರಭುತ್ವ ಸರಕಾರ ಎಂದರೆ ಜನರ ಕೆಲಸ ತಮ್ಮ ಮುಖಂಡರಿಗೆ ವೋಟುಕೊಟ್ಟು ಅವರು ತಮ್ಮನ್ನು ಆಳುವಂತೆ ನೋಡಿಕೊಳ್ಳುವುದಾಗಿದೆ. ಇಂತಹ ಸರಕಾರದ ವ್ಯವಸ್ಥೆ, ಕಾರ್ಮಿಕರ ಅಭಿಪ್ರಾಯದಲ್ಲಿ ಒಂದು ವೈರುಧ್ಯ.
ಕಾರ್ಮಿಕರು ಬಯಸುವುದು ಹೆಸರಿನಲ್ಲೂ ಮತ್ತು ವಾಸ್ತವಿಕವಾಗಿಯೂ ಜನತೆಯ ಸರಕಾರವನ್ನು. ಎರಡನೆಯದಾಗಿ, ಕಾರ್ಮಿಕರು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯದಲ್ಲಿ ಸಮಾನ ಅವಕಾಶದ ಹಕ್ಕು ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಅವರವರ ಅಗತ್ಯಕ್ಕೆ ತಕ್ಕಂತೆ ಬೆಳೆಯಲು ಪೂರ್ಣ ಸೌಕರ್ಯಗಳನ್ನು ಸರಕಾರವು ಒದಗಿಸುತ್ತದೆ’’ (ಸಂ:8/31) ಎನ್ನುತ್ತಾರೆ. ಬಹುಶಃ ಇದು ಅಂಬೇಡ್ಕರ್ ಅವರಿಗಿದ್ದ ಕಾರ್ಮಿಕರ ಬಗೆಗಿನ ಪರಿಕಲ್ಪನೆಯಾಗಿದೆ.
ಅಂಬೇಡ್ಕರ್ ಅವರು 1936ರಲ್ಲಿ ಹುಟ್ಟುಹಾಕಿದ ಸ್ವತಂತ್ರ ಕಾರ್ಮಿಕರ ಪಕ್ಷದ ಹಿನ್ನೆಲೆಯೂ ಬಹಳ ಮುಖ್ಯವಾದುದು. ಅವರು ಬ್ರಿಟನ್ನ ಕಾರ್ಮಿಕ ಚಳವಳಿಯ ಬೆಳವಣಿಗೆಯನ್ನು ಪರಾಮರ್ಶಿಸುತ್ತಾ ಅದು ಹೇಗೆ ಆಡಳಿತ ಸರಕಾರದ ಲಂಗು-ಲಗಾಮನ್ನು ಹಿಡಿದಿತ್ತು ಮತ್ತು ಟೋರಿ ಪಕ್ಷದವರಿಂದ ಎರಡು ಬಾರಿ ಅಧಿಕಾರ ಕಿತ್ತುಕೊಂಡಿತ್ತೆಂಬುದನ್ನು ವಿವರಿಸಿ, ಬ್ರಿಟಿಷ್ ಕಾರ್ಮಿಕ ಪಕ್ಷದ ಮಾದರಿಯಂತೆ ಈ ದೇಶದಲ್ಲೂ ಸಹ ಒಂದು ಸಂಯುಕ್ತ ಕಾರ್ಮಿಕ ಪಕ್ಷವನ್ನು ಕಟ್ಟಬೇಕಾದ ಅವಶ್ಯಕತೆಯ ಕುರಿತು ಒತ್ತಿ ಹೇಳಿದರು. ಹಾಗಾಗಿಯೇ ಭಾರತಕ್ಕೆ ಸ್ವರಾಜ್ಯ ಬಂದಾಗ ಅದು ಭಾರತದ ಕಾರ್ಮಿಕರ ಕೈಗೆ ಬರುವಂತೆ ನೋಡಿಕೊಳ್ಳಬೇಕೆಂದು ಅವರು ಕಾರ್ಮಿಕ ನಾಯಕರುಗಳನ್ನು ಹುರಿದುಂಬಿಸಿದರು (ಸಂ:18/516).
ಅಂಬೇಡ್ಕರ್ ಅವರು ಕಾರ್ಮಿಕ ನೀತಿ ಮತ್ತು ಕಾರ್ಮಿಕರ ಸ್ಥಿತಿಗತಿ ಕುರಿತಂತೆ ಭಾರತದ ಕಮ್ಯುನಿಷ್ಟರನ್ನೂ, ಕಾಂಗ್ರೆಸ್ ಪಕ್ಷವನ್ನೂ ತರಾಟೆಗೆ ತೆಗೆದುಕೊಂಡಿದ್ದರು. ‘‘ಭಾರತದಲ್ಲಿನ ಕಾರ್ಮಿಕ ಸಂಘಟನೆ ನಿಂತ ನೀರಾಗಿ ನಾರುತ್ತಿರುವ ಒಂದು ಹಳ್ಳವಾಗಿದೆ. ಇದಕ್ಕೆ ಸಂಪೂರ್ಣ ಕಾರಣವಾಗಿರುವವರು ಕಾರ್ಮಿಕ ಸಂಘಟನೆಯ ಮುಖಂಡರು; ಅವರು ಪುಕ್ಕಲರಾಗಿದ್ದಾರೆ, ಸ್ವಾರ್ಥಿಗಳಾಗಿದ್ದಾರೆ; ಅಥವಾ ತಪ್ಪುದಾರಿ ತುಳಿದಿದ್ದಾರೆ.
ಕೆಲವು ಕಾರ್ಮಿಕ ಮುಖಂಡರು ಕೇವಲ ಆರಾಮ ಕುರ್ಚಿಯ ತತ್ವಜ್ಞಾನಿಗಳಾಗಿದ್ದಾರೆ ಅಥವಾ ಪತ್ರಿಕೆಗಳಿಗೆ ಹೇಳಿಕೆ ಕೊಡುವ ರಾಜಕಾರಣಿಗಳಾಗಿದ್ದಾರೆ. ಕಾರ್ಮಿಕರನ್ನು ಸಂಘಟಿಸುವುದು, ಅವರಿಗೆ ಶಿಕ್ಷಣ ಕೊಡುವುದು, ಚಳವಳಿ ಮಾಡುವುದಕ್ಕೆ ಅವರಿಗೆ ಸಹಾಯ ಮಾಡುವುದು, ಅವರ ಕರ್ತವ್ಯದ ಭಾಗವಾಗಿಲ್ಲ. ಕಾರ್ಮಿಕರನ್ನು ಪತಿನಿಧಿಸುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ’’ (ಸಂ:18/411). ಎನ್ನುತ್ತಾರೆ.
‘‘ನಮ್ಮ ಸ್ವತಂತ್ರ ಕಾರ್ಮಿಕ ಪಕ್ಷ-ಸಮಾಜದ ದುರ್ಬಲವರ್ಗದವರ ರಕ್ಷಣೆಗಾಗಿ ನಿಂತಿದೆ. ಉಳುಮೆ ಮಾಡುವವರ ಮತ್ತು ಕಾರ್ಮಿಕರ ಹಿತ ರಕ್ಷಣೆ ಮಾಡುವುದು ನಮ್ಮ ಪಕ್ಷದ ಧ್ಯೇಯವಾಗಿದೆ. ಅಸ್ಪಶ್ಯರ, ಕಾರ್ಮಿಕ ವರ್ಗಗಳ, ಬಡವರ ಮತ್ತು ತುಳಿತಕ್ಕೊಳಗಾದ ಜನರ ಪರ ಹೋರಾಡುವುದೇ ನಮ್ಮ ಆದ್ಯತೆ. ಕಾರ್ಮಿಕ ಸಂಘಗಳು ರಾಜಕೀಯಕ್ಕೆ ಇಳಿಯಲೇಬೇಕು.
ಕಾರಣವೆಂದರೆ ರಾಜಕೀಯ ಅಧಿಕಾರವಿಲ್ಲದೆ, ಬರಿಯ ಕಾರ್ಮಿಕ ಸಂಘದ ಹಿತಾಸಕ್ತಿಗಳನ್ನು ಕಾಪಾಡಲು ಸಾಧ್ಯವೇ ಇಲ್ಲ.’’ (ಸಂ:18/411) ಎಂದು ಅಂಬೇಡ್ಕರ್ ನಂಬಿದ್ದರು. ಇದರ ಫಲವಾಗಿಯೇ ಸ್ವತಂತ್ರ ಕಾರ್ಮಿಕರ ಪಕ್ಷ ಮೈದಾಳಿತು.
ಕಾರ್ಮಿಕರಿಗೆ ಪ್ರತ್ಯೇಕ ಚುನಾಯಿತ ಮತ ಕ್ಷೇತ್ರಗಳಿರಬೇಕೇ ಬೇಡವೇ ಎನ್ನುವ ವಿಷಯದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರ ಮಧ್ಯೆ ಭಿನ್ನಾಭಿಪ್ರಾಯವಿತ್ತು. ಗಾಂಧಿ ‘‘ಯುರೋಪಿನ ಇತಿಹಾಸವನ್ನೇ ತೆಗೆದುಕೊಳ್ಳಿ ಕಾರ್ಮಿಕರಿಗೆ ಮತ್ತು ಮಹಿಳೆಯರಿಗೆ ಅಲ್ಲಿ ಪ್ರತ್ಯೇಕ ಚುನಾಯಿತ ಮತಕ್ಷೇತ್ರಗಳಿವೆಯೇ?’’ (ಸಂ:7/71) ಎಂದು ಪ್ರಶ್ನಿಸುವ ಮೂಲಕ ಕಾರ್ಮಿಕ ವಿರೋಧಿ ನಿಲುವು ತಾಳಿದರೆ, ಅಂಬೇಡ್ಕರ್ ಕಾರ್ಮಿಕರಿಗೆ ಪ್ರತ್ಯೇಕ ಮತಕ್ಷೇತ್ರಗಳ ಅಗತ್ಯವಿದೆ ಎಂದು ಕಾರ್ಮಿಕರ ಪರವಾಗಿ ನಿಲ್ಲುತ್ತಾರೆ.
ಅಂಬೇಡ್ಕರರು 1942ರ ಜುಲೈ 20ರಂದು ವೈಸ್ರಾಯರ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿ ಸೇರಿ, ಕಾರ್ಮಿಕ ಖಾತೆಯನ್ನು ವಹಿಸಿಕೊಳ್ಳುತ್ತಾರೆ. 1942 ಆಗಸ್ಟ್ 7ರಂದು ಹೊಸದಿಲ್ಲಿಯಲ್ಲಿ ನಡೆದ ಜಂಟಿ ಕಾರ್ಮಿಕ ಸಮ್ಮೇಳನದಲ್ಲಿ ಅಂಬೇಡ್ಕರ್, ಕಾರ್ಮಿಕ ಶಾಸನ ರಚನೆಯಲ್ಲಿ ಏಕರೂಪತೆಯನ್ನು ತರುವುದು, ಕೈಗಾರಿಕಾ ವ್ಯಾಜ್ಯಗಳ ಪರಿಹಾರಕ್ಕೆ ಒಂದು ಕಾರ್ಯವಿಧಾನವನ್ನು ರೂಪಿಸುವುದು ಮತ್ತು ಮಾಲಕರು-ನೌಕರರ ನಡುವೆ ಇರುವಂತಹ ಅಖಿಲ ಭಾರತ ಪ್ರಾಮುಖ್ಯವಿರುವ ಎಲ್ಲ ವಿಚಾರಗಳ ಚರ್ಚೆ ಮಾಡುವ ಬಗ್ಗೆ (ಸಂ:8/12) ಚಾರಿತ್ರಿಕ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ.
ಬಾಬಾ ಸಾಹೇಬರು 1943ರಲ್ಲಿ ಮಾಡಿದ ‘‘ಭಾರತೀಯ ಕಾರ್ಮಿಕ ವರ್ಗವು ಯುದ್ಧವನ್ನು ಗೆಲ್ಲಲೇಬೇಕೆಂದು ಏಕೆ ನಿರ್ಧರಿಸಿದೆ?’’ ಎನ್ನುವ ರೇಡಿಯೊ ಭಾಷಣ ಬಹಳ ಮುಖ್ಯವಾದುದು. ಪ್ರಜಾಪ್ರಭುತ್ವ ನೆಲೆಗೊಳ್ಳಲು ಕಾರ್ಮಿಕರ ಹೋರಾಟ ಬಹಳ ಮುಖ್ಯವಾದುದು. ಹಿಟ್ಲರನ ಸರ್ವಾಧಿಕಾರದ ನಾಶಕ್ಕೆ ಜಗತ್ತಿನ ಕಾರ್ಮಿಕರು ಒಟ್ಟಾಗಬೇಕು ಎನ್ನುವ ಪ್ರಮೇಯ ಕಾರ್ಮಿಕರನ್ನು ಪ್ರಜಾಪ್ರಭುತ್ವದ ರಕ್ಷಕರು ಎನ್ನುವ ನೆಲೆಯಲ್ಲಿ ವಿಶ್ಲೇಷಿಸುತ್ತಾರೆ. ಕಾರ್ಮಿಕ ಸಮ್ಮೇಳನಗಳಲ್ಲಿ ಅಂಬೇಡ್ಕರ್ ಮಾಡಿರುವ ಭಾಷಣಗಳು ಭಾರತದ ಕಾರ್ಮಿಕ ಚಳವಳಿಯ ಸೈದ್ಧಾಂತಿಕ ಪ್ರಮೇಯಗಳಂತಿವೆ.
ಗಣಿಗಳಲ್ಲಿನ ಮಹಿಳಾ ಕಾಮಿಕರ ಹೆರಿಗೆ ಸೌಲಭ್ಯ ಶಾಸನ 1941ಕ್ಕೆ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಿ ಮಾನವೀಯಗೊಳಿಸುವುದು, ಕಾರ್ಮಿಕರ ಕಲ್ಯಾಣ ನಿಧಿಯನ್ನು ಸ್ಥಾಪಿಸಿ ಕಷ್ಟಕಾಲದಲ್ಲಿ ಈ ನಿಧಿ ನೆರವಾಗುವಂತೆ ರೂಪಿಸುವುದು, 1926ರ ಭಾರತೀಯ ಕಾರ್ಮಿಕ ಸಂಘಗಳ ಶಾಸನವನ್ನು ತಿದ್ದುಪಡಿ ಮಾಡಿ ಕಾರ್ಮಿಕರ ಪರವಾದ ಸೂಕ್ಷ್ಮಗಳನ್ನು ಮುನ್ನೆಲೆಗೆ ತರುವುದು, 1944ರಲ್ಲಿ ಕಲ್ಲಿದ್ದಲು ಗಣಿ ಕಾರ್ಮಿಕರ ಕಲ್ಯಾಣ ಕಾಯ್ದೆಯನ್ನು ಜಾರಿ ಮಾಡುವುದು, ಅಭ್ರಕ ಉದ್ದಿಮೆಗೆ ಸುಭದ್ರ ಮತ್ತು ಸ್ಥಿರ ತಳಹದಿಯನ್ನೊದಗಿಸುವುದು, ಕಾರ್ಮಿಕರ ಸಂಘಟನೆ, ಚಳವಳಿ, ಮುಷ್ಕರಗಳಿಗೆ ಮುಕ್ತ ಸ್ವಾತಂತ್ರ್ಯ ನೀಡುವುದು ಮುಂತಾದವು ಭಾರತದ ಕಾರ್ಮಿಕ ಸಮುದಾಯ ಅಂಬೇಡ್ಕರ್ ಅವರನ್ನು ಎಂದೆಂದೂ ನೆನೆಯುವಂತೆ ಮಾಡಿವೆ.
ಕೊನೆಗೆ ಸಂವಿಧಾನದಲ್ಲಿ ಕಾರ್ಮಿಕರ ಪರವಾದ ಕಾಯ್ದೆಗಳನ್ನು ರೂಪಿಸಿದ್ದು ಮಹತ್ವದ ಸಂಗತಿಯಾಗಿದೆ. ಕಾರ್ಮಿಕರಿಗೆಲ್ಲಾ ಜೀವನಾಧಾರಿತ ಕೂಲಿ ನೀಡಬಲ್ಲ ಸೂಕ್ತ ಕಾನೂನುಗಳನ್ನು ನಿರ್ಮಿಸಬೇಕು. ಅಲ್ಲದೆ ಈ ಉದ್ದೇಶಕ್ಕೆಂದೇ ಆರ್ಥಿಕ ಸಂಘಟನೆಗಳನ್ನು ರಚಿಸಬೇಕು. ಕಾರ್ಮಿಕರಿಗೆ ಸೂಕ್ತ ವಿಶ್ರಾಂತಿ ವ್ಯವಸ್ಥೆ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಅವಕಾಶಗಳನ್ನೂ ಒದಗಿಸಬೇಕು (ಸಂ:12/115) ಎನ್ನುವ ಅಂಶಗಳನ್ನು ಕಾಯ್ದೆಯನ್ನಾಗಿಸುತ್ತಾರೆ.
ಸಮವರ್ತಿ ಪಟ್ಟಿಯಲ್ಲಿ ಕಾರ್ಮಿಕರ ಕಲ್ಯಾಣ; ಕೂಲಿಗಾರರ ಪರಿಸ್ಥಿತಿಗಳು; ಅವರ ಭವಿಷ್ಯ ನಿಧಿಗಳು; ಮಾಲಕರ ಜವಾಬ್ದಾರಿ ಮತ್ತು ಕಾರ್ಮಿಕರಿಗಿರುವ ಪರಿಹಾರ; ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವಾಗ ಗಾಯಗೊಂಡವರ ಪಿಂಚಣಿಯನ್ನು ಒಳಗೊಂಡ ಕಾರ್ಮಿಕರ ಆರೋಗ್ಯ ವಿಮೆ; ಅವರ ಮುಪ್ಪಿನ ಪಿಂಚಣಿಗಳು. ನಿರುದ್ಯೋಗ ಮತ್ತು ಸಾಮಾಜಿಕ ವಿಮೆ(ಸಂ:12/282) ಮುಂತಾದ ಕಾರ್ಮಿಕ ಪರವಾದ ಕಾಯ್ದೆಗಳಿಗೆ ಜೀವ ತುಂಬುವುದು ಆಳದಲ್ಲಿ ಅಂಬೇಡ್ಕರ್ ಅವರಿಗಿರುವ ಕಾರ್ಮಿಕ ಕಾಳಜಿಯೇ ಆಗಿದೆ.
1947ರ ಮಾರ್ಚ್ 15ರಂದು ಮಂಡಿಸಿದ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟದ ಪರವಾಗಿ ಪರಿಶಿಷ್ಟ ಜಾತಿಗಳ ರಕ್ಷಣೆ ಕೋರಿ ರಾಜ್ಯಾಂಗ ರಚನಾ ಸಭೆಗೆ ಅರ್ಪಿಸಿದ ಮನವಿ ಚಾರಿತ್ರಿಕವಾಗಿ ಮುಖ್ಯವಾದುದು. ಆರ್ಥಿಕ ಶೋಷಣೆಯ ವಿರುದ್ಧ ರಕ್ಷಣೆಯ ಭಾಗದಲ್ಲಿ ಮೂಲ ಕೈಗಾರಿಕೆಗಳು ಸರಕಾರದ ಒಡೆತನದಲ್ಲಿ ಇರತಕ್ಕದ್ದು ಎಂದು ಮನವಿ ಮಾಡಿದ್ದರು. ಜೀವವಿಮೆ ಸರಕಾರಿ ಸ್ವಾಮ್ಯದಲ್ಲಿದ್ದು ಪ್ರತಿಯೊಬ್ಬ ವಯಸ್ಕರಿಗೂ ಅವರ ದುಡಿಮೆಯನ್ನಾಧರಿಸಿ ಜೀವವಿಮೆಯನ್ನು ಸರಕಾರ ಮಾಡಬೇಕು.
ಭೂಮಿ ರಾಷ್ಟ್ರೀಕರಣಗೊಂಡು, ಕೃಷಿಯು ಒಂದು ಸರಕಾರಿ ಕೈಗಾರಿಕೆಯಾಗಿರತಕ್ಕದ್ದು ಎಂದು ಮಂಡಿಸುತ್ತಾರೆ. ಭೂಮಾಲಕ, ಗೇಣಿದಾರ, ಭೂಹೀನ ಕೃಷಿಕಾರ್ಮಿಕ ಎಂಬ ವ್ಯತ್ಯಾಸವಿಲ್ಲದಂತೆ, ಜಾತಿ ಆಧಾರಿತ ತಾರತಮ್ಯವಿಲ್ಲದಂತೆ, ಎಲ್ಲ ಗ್ರಾಮಸ್ಥರಿಗೂ ಭೂಮಿಯನ್ನು ಕೃಷಿಗೆ ಬಿಟ್ಟುಕೊಡಬೇಕೆಂದು ಆಗ್ರಹಿಸುತ್ತಾರೆ. ಕಡೆಯದಾಗಿ ಕೃಷಿಕರನ್ನು ಕಾರ್ಮಿಕರೆಂದು ಪರಿಭಾವಿಸುವೆಡೆಗೆ ಚಲಿಸುತ್ತಾರೆ.
ಡಾ. ಅಂಬೇಡ್ಕರ್ ಅವರು ಕೊಲಂಬಿಯಾ ವಿಶ್ವವಿದ್ಯಾನಿಲಯದ ಎಂ.ಎ. ಪರೀಕ್ಷೆಗೆ 1913-15ರಲ್ಲಿ ಆಯ್ದುಕೊಂಡ ಪ್ರಾಚೀನ ಇಂಡಿಯಾದ ವಾಣಿಜ್ಯದ ಕುರಿತ ಪ್ರೌಢ ಪ್ರಬಂಧದಲ್ಲಿ ‘‘ಭೂಮಿಯನ್ನು ರೈತ ಮತ್ತು ಆತನ ಕುಟುಂಬಸ್ಥರು ಮತ್ತು ಕೆಲವು ಬಾರಿ ಸಂಬಳದ ಕಾರ್ಮಿಕರಿಂದ ಕೃಷಿ ಮಾಡುತ್ತಿದ್ದರು. ಗುಲಾಮರಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ಸ್ವತಂತ್ರ ಕಾರ್ಮಿಕರಿದ್ದರು. ಅವರಿಗೆ ಹಣ ಅಥವಾ ಆಹಾರವನ್ನು ಕೊಟ್ಟು ದುಡಿಸಿಕೊಳ್ಳಲಾಗುತ್ತಿತ್ತು’’ (ಸಂ:11/11) ಎಂದು ಕಾರ್ಮಿಕರು, ಗುಲಾಮರು ಮತ್ತು ಕೃಷಿಕರನ್ನು ಪ್ರಾಚೀನ ಭಾರತದ ವಾಣಿಜ್ಯ ವ್ಯವಸ್ಥೆಯಲ್ಲಿ ಗುರುತಿಸುತ್ತಾರೆ.
ಬಹುಶಃ ಅಂಬೇಡ್ಕರ್ 1913ರಲ್ಲಿ ಕಾರ್ಮಿಕರ ಬಗ್ಗೆ ಜಾಗತಿಕ ನೆಲೆಯಲ್ಲಿ ಚರ್ಚಿಸಲು ಆರಂಭಿಸುತ್ತಾರೆ. ಇದು 1956ರಲ್ಲಿ ಬಾಬಾ ಸಾಹೇಬರು ಬರೆದು ಮುಗಿಸಿದ ‘ಬುದ್ಧ ಮತ್ತು ಆತನ ದಮ್ಮ’ ಕೃತಿಯಲ್ಲಿ ಒಂದು ಪರಿಹಾರ ಸೂಚನೆಯ ನೆಲೆ ತಲುಪುತ್ತದೆ. ಸಿದ್ಧಾರ್ಥ ಚಿಕ್ಕಂದಿನಲ್ಲಿ ಸ್ನೇಹಿತರಿಗೆ ಒಬ್ಬ ಮನುಷ್ಯ ಇನ್ನೊಬ್ಬನನ್ನು ಶೋಷಿಸುವುದು ಸರಿಯೇ? ‘‘ಕಾರ್ಮಿಕರು ದುಡಿಯಬೇಕು; ಯಜಮಾನರು ಅವರ ದುಡಿಮೆಯ ಫಲವನ್ನು ಅನುಭವಿಸಬೇಕು ಎಂಬುದು ಯಾವ ನ್ಯಾಯ?’’ ಎಂದು ಕೇಳುತ್ತಾನೆ.
(ಸಂ:10/11). ಮುಂದುವರಿದು ಯಜಮಾನರು ಯಜಮಾನರಾಗಿಯೇ, ಕಾರ್ಮಿಕರು ಕಾರ್ಮಿಕರಾಗಿಯೇ ಏಕೆ ಉಳಿಯುತ್ತಾರೆ? ಇದಕ್ಕೆ ಪರಿಹಾರವಿಲ್ಲವೇ ಎಂದಾಗ, ಬುದ್ಧನು ಭ್ರಾತೃತ್ವ ಭಾವವು ವಿಶ್ವವ್ಯಾಪಿಯಾಗಿ ಪರಿಣಾಮಕಾರಿಯಾಗುವಂತೆ ಮಾಡುವುದೇ ಇದಕ್ಕೆ ಏಕೈಕ ಪರಿಹಾರ ಎನ್ನುತ್ತಾರೆ (ಸಂ:10/289). ಹೀಗೆ ಬಾಬಾ ಸಾಹೇಬರು ಭಾರತದ ಕಾರ್ಮಿಕ ಸಮುದಾಯದ ಪಾಲಿಗೆ ವರವಾಗಿ ಒದಗಿಬಂದರು.







