ಪಕ್ಕಲಡ್ಕ ಯುವಕ ಮಂಡಲದಿಂದ ಆ್ಯಂಬ್ಯುಲೆನ್ಸ್ ಲೋಕಾರ್ಪಣೆ

ಮಂಗಳೂರು: ರಾತ್ರಿ ಶಾಲೆಯ ಮೂಲಕ 1953 ರಲ್ಲಿ ಸ್ಥಾಪನೆಗೊಂಡ ಪಕ್ಕಲಡ್ಕ ಯುವಕ ಮಂಡಲದ 70ನೇ ವಾರ್ಷಿಕೋತ್ಸವವು ಇತ್ತೀಚೆಗೆ ಪಕ್ಕಲಡ್ಕ ಯುವಕ ಮಂಡಲದ ಮೈದಾನದಲ್ಲಿ ನಡೆಯಿತು.
ಈ ಬಾರಿ 70ನೇ ವರ್ಷದ ನೆನಪಿನಲ್ಲಿ ಸಂಗಾತಿ ಶ್ರೀನಿವಾಸ್ ಬಜಾಲ್ ಸ್ಮರಣಾರ್ಥ ಬಜಾಲ್ ಸುತ್ತಮುತ್ತಲಿನ ಗ್ರಾಮದ ಅಸಹಾಯಕ, ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಉಚಿತ ಆ್ಯಂಬುಲೆನ್ಸ್‌ನ್ನು ಲೋಕಾರ್ಪಣೆಗೊಳಿಸಲಾಯಿತು.
ಮಂಗಳೂರು ಅಸೋಸಿಯೇಶನ್ ಸೌದಿ ಅರೇಬಿಯಾ ಇದರ ಅಧ್ಯಕ್ಷ, ಪಕ್ಕಲಡ್ಕ ಯುವಕ ಮಂಡಲದ ಆಚರಣಾ ಸಮಿತಿಯ ಗೌರವಾಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಆ್ಯಂಬುಲೆನ್ಸ್ ಕೀಯನ್ನು ಪಕ್ಕಲಡ್ಕ ಯುವಕ ಮಂಡಲದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಮಾಜಿ ವಿದ್ಯಾರ್ಥಿ ಮುಖಂಡ, ಬಂಟ್ವಾಳ ಪುರಸಭೆ ಮಾಜಿ ಸದಸ್ಯ ಪ್ರವೀಣ್ ಬಂಟ್ವಾಳ ಹಸಿರು ನಿಶಾನೆ ತೋರಿಸಿದರು. ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ನಾಗೇಶ್ ಶೆಟ್ಟಿ ಆ್ಯಂಬುಲೆನ್ಸ್ ವಾಹನ ಚಾಲನೆ ನಡೆಸಿದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್., ಕಾರ್ಪೊರೇಟರ್ ಪ್ರವೀಣ್‌ಚಂದ್ರ ಆಳ್ವ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಶಾಫಿ ಆಯುರ್ವೇದಿಕ್ ನರ್ಸಿಂಗ್ ಹೋಮ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಜೈನುದ್ದೀನ್, ಕಾರ್ಮಿಕ ಮುಖಂಡ ಕೆ. ಯಾದವ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ, ಅಸುಂತಾ ಡಿಸೋಜ, ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಮಾಜಿ ಅಧ್ಯಕ್ಷ ಉದಯಚಂದ್ರ ರೈ, ಜನತಾ ವ್ಯಾಯಾಮ ಶಾಲೆಯ ಅಧ್ಯಕ್ಷ ಕೇಶವ ಭಂಡಾರಿ, ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷ ದೀಪಕ್ ಬಜಾಲ್, ಕಾರ್ಯದರ್ಶಿ ಪ್ರೀತೇಶ್ ಬಜಾಲ್, ಆಚರಣಾ ಸಮಿತಿಯ ಅಧ್ಯಕ್ಷ ಸಂತೋಷ್ ಬಜಾಲ್, ಕಾರ್ಯದರ್ಶಿ ನಾಗರಾಜ್ ಬಜಾಲ್, ಕೋಶಾಧಿಕಾರಿ ಜಗದೀಶ್ ಬಜಾಲ್ ಉಪಸ್ಥಿತರಿದ್ದರು.