ಬಜರಂಗದಳಕ್ಕೂ ಹನುಮಂತನಿಗೂ ಏನು ಸಂಬಂಧ?, ನಿಷೇಧದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಡಿ.ಕೆ.ಶಿವಕುಮಾರ್
''ಬಜರಂಗದಳ ನಿಷೇಧ ವಿಚಾರದಿಂದ ಯಾವುದೇ ಡ್ಯಾಮೇಜ್ ಆಗುವುದಿಲ್ಲ''

ಬೆಂಗಳೂರು, ಮೇ 3: ‘ನೈತಿಕ ಪೊಲೀಸ್ ಗಿರಿ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿದ್ದ ಬಜರಂಗ ದಳವನ್ನು ಕಾನೂನು ಸುವ್ಯವಸ್ಥೆಯೊಳಗೆ ಇರಿಸಬೇಕೆಂಬುದು ನಮ್ಮ ಉದ್ದೇಶ. ಬಜರಂಗದಳಕ್ಕೂ ಹನುಮಂತನಿಗೂ ಏನು ಸಂಬಂಧ?, ನಿಷೇಧದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾವು ಹನುಮಂತನ ಭಕ್ತರು. ನಾವು ದಿನನಿತ್ಯ ಹನುಮನ್ ಚಾಲೀಸ ಪಠಣ ಮಾಡುತ್ತೇವೆ. ಪ್ರಧಾನಿ ಮೋದಿ ನಮ್ಮ ವಿರುದ್ಧ ಅನಗತ್ಯ ಟೀಕೆ ಮಾಡುವುದನ್ನು ಬಿಟ್ಟು, ಈ ರಾಜ್ಯಕ್ಕೆ ಡಬಲ್ ಇಂಜಿನ ಸರಕಾರದ ಕೊಡುಗೆಗಳೇನು ಎಂಬುದನ್ನು ಹೇಳಲಿ’ ಎಂದು ಸವಾಲು ಹಾಕಿದರು.
‘ಕರ್ನಾಟಕ ರಾಜ್ಯವು ಸರ್ವಜನಾಂಗದ ಶಾಂತಿಯ ತೋಟ, ಇದು ಕದಡಬಾರದು, ಇಲ್ಲಿನ ಸೌಹಾರ್ದತೆ ನಾಶವಾಗಬಾರದು. ಹನುಮಂತನೇ ಬೇರೆ, ಬಜರಂಗದಳವೇ ಬೇರೆ. ಬಜರಂಗದಳ ಕೇವಲ ಒಂದು ಸಂಘಟನೆ. ಆಂಜನೇಯನ ಹೆಸರು ಇಟ್ಟುಕೊಂಡ ಮಾತ್ರಕ್ಕೆ ಅವರು ಹನುಮಂತನೇ? ಅವರು ಕಾನೂನು ವ್ಯವಸ್ಥೆ ದುರ್ಬಳಕೆ ಮಾಡುತ್ತಿದ್ದರು’ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
‘ನಮ್ಮ ಪ್ರಣಾಳಿಕೆಯಲ್ಲಿನ ಅಂಶವನ್ನು ತಿರುಚಿ, ಉದ್ರೇಕಿಸಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಬಿಜೆಪಿಯವರು ಮುಂದಾಗಿದ್ದಾರೆ. ರಾಮನ ತಂದೆ ದಶರಥ ಮಹರಾಜನ ದೇವಾಲಯ ಎಲ್ಲೂ ಇಲ್ಲ. ಆದರೆ, ರಾಮನ ಭಂಟ ಹನುಮಂತನ ದೇವಾಲಯ ಎಲ್ಲ ಹಳ್ಳಿಗಳಲ್ಲೂ ಇದೆ. ಕಾರಣ ಆಂಜನೇಯ ಸೇವಕ. ನಾವು ಆಂಜನೇಯನ ಪ್ರವೃತ್ತಿಯವರು’ ಎಂದು ಶಿವಕುಮಾರ್ ತಿಳಿಸಿದರು.
‘ಬಜರಂಗದಳ ಎಂದು ಹೆಸರಿಟ್ಟುಕೊಂಡ ಮಾತ್ರಕ್ಕೆ ಆಂಜನೇಯ ಎಂದು ಹೇಳಲು ಸಾಧ್ಯವಿಲ್ಲ. ಬಿಜೆಪಿಯವರು ‘ನಾನು ಬಜರಂಗಿ’ ಎಂದು ಆಂದೋಲನ ಮಾಡುವ ಮುನ್ನ, ರಾಜ್ಯದ ಜನರ ಹೊಟ್ಟೆಗೆ ಏನು ಕೊಟ್ಟಿದ್ದಾರೆ? ರಾಜ್ಯದ ಯುವಕರಿಗೆ ಎಷ್ಟು ಉದ್ಯೋಗ ಕೊಟ್ಟಿದ್ದಾರೆ. ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ? ಎಷ್ಟು ಬಂಡವಾಳ ಹೂಡಿಕೆ ತಂದಿದ್ದಾರೆಂದು ಹೇಳಲಿ’ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.
‘ಜನರ ಗಮನ ಬೇರೆಡೆ ಸೆಳೆಯಲು ಇಂತಹ ಆಂದೋಲನ ಮಾಡುತ್ತಿದ್ದಾರೆ. ನಾವು ದಿನನಿತ್ಯ ಹನುಮ ಚಾಲೀಸ ಪಠಣೆ ಮಾಡುತ್ತೇವೆ. ಅವರು ಮಾತ್ರ ಹನುಮನ ಭಕ್ತರೇ? ನಾವು ಹನುಮನ ಭಕ್ತರಲ್ಲವೇ? ಹಿಂದೆ ಇದ್ದ ಆರೆಸ್ಸೆಸ್‍ನವರು ಬೇರೆ, ಈಗಿರುವ ಆರೆಸ್ಸೆಸ್‍ನವರು ಬೇರೆ. ನಾವು ಸಮಾಜದಲ್ಲಿ ಶಾಂತಿ ಭಂಗ ಮಾಡುವ ಸಂಘಟನೆಗಳ ಬಗ್ಗೆ ಮಾತನಾಡಿದ್ದು, ಯಾವ ಸಂಘಟನೆಗಳು ಸಮಾಜದ ಶಾಂತಿಗೆ ಭಂಗ ಮಾಡುತ್ತವೆಯೋ ಅಂತಹ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದೇವೆ’ ಎಂದು ಅವರು ಸ್ಪಷ್ಟಣೆ ನೀಡಿದರು.
‘ಬಿಜೆಪಿಯವರಿಗೆ ನಮ್ಮ ಗ್ಯಾರಂಟಿ ಯೋಜನೆಗಳಿಂದ ಆತಂಕ ಎದುರಾಗಿದೆ. 200 ಯುನಿಟ್ ಉಚಿತ, ಮನೆಯೊಡತಿಗೆ 2ಸಾವಿರ ರೂ.ಖಚಿತ, ಅನ್ನಭಾಗ್ಯದಲ್ಲಿ 10ಕೆ.ಜಿ ಅಕ್ಕಿ ನಿಶ್ಚಿತ. ಯುವಕರಿಗೆ ನಿರುದ್ಯೋಗ ಭತ್ಯೆ ಹಾಗೂ ಮಹಿಳೆಯರಿಗೆ ಸಾರ್ವಜನಿಕ ಬಸ್‍ಗಳಲ್ಲಿ ಉಚಿತ ಪ್ರಯಾಣ ಜಾರಿ ಮಾಡುತ್ತೇವೆ. ಇವುಗಳನ್ನು ಅರಗಿಸಿಕೊಳ್ಳಲಾಗದೆ ಒಂದಲ್ಲಾ ಒಂದು ವಿಚಾರವಾಗಿ ಗೊಂದಲ ಮೂಡಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ಕಾಂಗ್ರೆಸ್ 141 ಸ್ಥಾನಗಳಲ್ಲಿ ಗೆಲವು ಸಾಧಿಸಿ ಅಧಿಕಾರಕ್ಕೆ ಬಂದೇ ಬರಲಿದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
‘ಪ್ರಧಾನಿ ಮೋದಿ ಹೊಸ ಕಥೆ ಎಣೆಯಲು ಪ್ರಯತ್ನಿಸುತ್ತಿದ್ದಾರೆ. ‘ಕುಂಬಳಕಾಯಿ ಕಳ್ಳ’ ಎಂದರೆ ನೀವು ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಿ? ಶಿವಮೊಗ್ಗದಲ್ಲಿ ಬಿಜೆಪಿಯಲ್ಲಿದ್ದ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಏನು ಹೇಳಿದರು? ಶಿವಮೊಗ್ಗದಲ್ಲಿ ಕೋಮು ಸಂಘರ್ಷವನ್ನು ತಡೆಯುತ್ತೇನೆಂದು ಬೋರ್ಡ್ ಹಾಕಿಕೊಂಡಿದ್ದರು. ಶಿವಮೊಗ್ಗದಲ್ಲಿ ಈಶ್ವರಪ್ಪಗೆ ಏಕೆ ಟಿಕೆಟ್ ನೀಡಲಿಲ್ಲ?’ ಎಂದು ಅವರು ಪ್ರಶ್ನಿಸಿದರು.
‘ಬಜರಂಗದಳ ನಿಷೇಧ ವಿಚಾರದಿಂದ ಯಾವುದೇ ಡ್ಯಾಮೇಜ್ ಆಗುವುದಿಲ್ಲ. ನಾನು ಹಿಂದೂ, ರಾಮ ಹಾಗೂ ಹನುಮಂತನ ಭಕ್ತ. ಇಂದು ನಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ಅಂಬೇಡ್ಕರ್ ಅವರ ಮೊಮ್ಮಗ ಆನಂದ್ ರಾಜ್ ಆಗಮಿಸಿದ್ದಾರೆ. ಅವರನ್ನು ನಾವು ಸ್ವಾಗತಿಸುತ್ತೇವೆ. ಅವರು ನಮಗೆ ಶಕ್ತಿ ತುಂಬಲು ಬಂದಿದ್ದಾರೆ’ ಎಂದು ಶಿವಕುಮಾರ್ ತಿಳಿಸಿದರು.
‘ಬಿಜೆಪಿಯವರು ಎಷ್ಟು ದೂರ ಬೇಕಾದರೂ ನಡೆಯಲಿ. ಪೊಲೀಸರು, ಅಧಿಕಾರಿಗಳನ್ನು ಅವರಿಗೆ ಬೇಕಾದ ರೀತಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ರೋಡ್ ಶೋ, ಹೆಲಿಕಾಪ್ಟರ್ ಪ್ರಯಾಣದಲ್ಲಿ ನಮ್ಮ ನಾಯಕರ ಪ್ರಯಾಣಕ್ಕೆ ಅಡ್ಡಿಪಡಿಸಿದ್ದಾರೆ. ಆದರೆ, ಬಿಜೆಪಿ ನಾಯಕರ ಪ್ರಯಾಣಕ್ಕೆ ಯಾವುದೇ ಅಡ್ಡಿ ಇಲ್ಲ. ಮೇ 7, 8ರಂದು ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಪ್ರಚಾರ ಮಾಡಲಿದ್ದಾರೆ’ ಎಂದು ತಿಳಿಸಿದರು.