ಅದಾನಿ ಟೋಟಲ್ ಗ್ಯಾಸ್ ಆಡಿಟರ್ ಹುದ್ದೆಗೆ ರಾಜೀನಾಮೆ ನೀಡಿದ ಶಾ ಧಂಢರಿಯಾ ಸಂಸ್ಥೆ
ಹಿಂಡೆನ್‌ಬರ್ಗ್ ವರದಿಯಲ್ಲಿ ಉಲ್ಲೇಖಗೊಂಡಿದ್ದ ಕಂಪೆನಿ

ಹೊಸದಿಲ್ಲಿ: ಗೌತಮ್ ಅದಾನಿ ಒಡೆತನದ ಅದಾನಿ ಸಂಸ್ಥೆ ನಡೆಸಿದೆಯೆನ್ನಲಾದ ಅವ್ಯವಹಾರಗಳ ಕುರಿತು ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯ ಸ್ಫೋಟಕ ವರದಿಯಲ್ಲಿ ಉಲ್ಲೇಖಗೊಂಡಿದ್ದ ಲೆಕ್ಕಪರಿಶೋಧನಾ ಸಂಸ್ಥೆ ಶಾ ಧಂಢರಿಯಾ & ಕೋ, ಅದಾನಿ ಟೋಟಲ್ ಗ್ಯಾಸ್‌ನ ಸ್ಟೆಟ್ಯುಟರಿ ಆಡಿಟರ್ ಹುದ್ದೆಗೆ ರಾಜೀನಾಮೆ ನೀಡಿದೆ.
ಅದಾನಿ ಸಮೂಹದ ಹೆಚ್ಚಿನ ಸಂಸ್ಥೆಗಳ ಲೆಕ್ಕಪರಿಶೋಧನೆ ನಡೆಸುವ ಶಾ ಧಂಢರಿಯಾ & ಕೋ ಮತ್ತು ಧರ್ಮೇಶ್ ಪಾರಿಖ್ & ಕೋ ಸಂಸ್ಥೆಗಳು ಪರಸ್ಪರ ನಂಟು ಹೊಂದಿವೆ ಎಂದು ಅಕ್ಟೋಬರ್ 2022ರಲ್ಲಿ ಮಾರ್ನಿಂಗ್ ಕಾಂಟೆಕ್ಸ್ಟ್ ವರದಿ ಮಾಡಿತ್ತಲ್ಲದೆ ಸಂಸ್ಥೆಯ ಕಾರ್ಪೊರೇಟ್ ಗವರ್ನೆನ್ಸ್ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.
ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಲೆಕ್ಕಪರಿಶೋಧಕರಿಗೆ ನೀಡುವ ರೂ. 84 ಕೋಟಿಗೆ ಹೋಲಿಸಿದಾಗ ಅದಾನಿ ಸಂಸ್ಥೆ ತನ್ನ ಲೆಕ್ಕಪರಿಶೋಧಕರಿಗೆ ರೂ. 7 ಕೋಟಿಗಿಂತ ಸ್ವಲ್ಪ ಹೆಚ್ಚು ನೀಡುತ್ತಿದೆ ಎಂದೂ ವರದಿಯಾಗಿತ್ತು.
ಜನವರಿಯಲ್ಲಿ ಬಿಡುಗಡೆಗೊಂಡ ಹಿಂಡೆನ್‌ಬರ್ಗ್ ವರದಿಯಲ್ಲಿ ಕೂಡ ಅದಾನಿ ಸಮೂಹ ಸಂಸ್ಥೆಗಳನ್ನು ಹೋಲಿಸಿದಾಗ ಅವುಗಳ ಲೆಕ್ಕಪರಿಶೋಧನೆ ನಡೆಸುವ ಸಂಸ್ಥೆಗಳ ಗಾತ್ರ ಮತ್ತು ಸಾಮರ್ಥ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿತ್ತು.
ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಗಳ ಸ್ವತಂತ್ರ ಆಡಿಟರ್ ಶಾ ಧಂಢರಿಯಾ ಎಂಬ ಪುಟ್ಟ ಸಂಸ್ಥೆ ಎಂದೂ ವರದಿ ಹೇಳಿತ್ತಲ್ಲದೆ ಈ ಸಂಸ್ಥೆಗೆ ಪ್ರಸ್ತುತ ವೆಬ್‌ಸೈಟ್ ಇಲ್ಲ ಹಾಗೂ ಅದರ ಹಿನ್ನೆಲೆ ಪರಿಶೀಲಿಸಿದಾಗ 4 ಪಾಲುದಾರರು ಹಾಗೂ 11 ಉದ್ಯೋಗಿಗಳಿರುವುದು ಹಾಗೂ ಕಚೇರಿಗೆ ಮಾಸಿಕ ರೂ. 32,000 ಬಾಡಿಗೆ ನೀಡುತ್ತಿದೆ ಎಂದು ವರದಿ ಹೇಳಿತ್ತು.
ಅದಾನಿ ಸಂಸ್ಥೆಯ ವಾರ್ಷಿಕ ಲೆಕ್ಕಪರಿಶೋಧನೆ ವರದಿಗಳಿಗೆ ಸಹಿ ಹಾಕಿದ ಶಾ ದಂಢರಿಯಾ ಆಡಿಟರ್‌ಗಳ ವಯಸ್ಸು 24 ಹಾಗೂ 23 ಎಂದೂ ಹಿಂಡೆನ್‌ಬರ್ಗ್ ವರದಿ ಹೇಳಿತ್ತು.
ವೃತ್ತಿಪರವಾಗಿ ಇತರ ನಿಯೋಜನೆಗಳಲ್ಲಿ ವ್ಯಸ್ತವಾಗಿರುವುದರಿಂದ ಹೆಚ್ಚಿನ ಒತ್ತಡದಿಂದಾಗಿ ಅದಾನಿ ಟೋಟಲ್ ಗ್ಯಾಸ್ ನಿಂದ ರಾಜೀನಾಮೆ ನೀಡಿರುವುದಾಗಿ ಶಾ ಧಂಢರಿಯಾ ಹೇಳಿದೆ. ಶಾ ಧಂಢರಿಯಾ ಬದಲು ಈಗ ಅದಾನಿ ಸಂಸ್ಥೆ ತನ್ನ ಅದಾನಿ ಟೋಟಲ್ ಗ್ಯಾಸ್‌ಗಾಗಿ ವಾಲ್ಟರ್ ಚಂದಿಯೋಕ್ & ಕೋ ಅನ್ನು ಲೆಕ್ಕಪರಿಶೋಧಕರಾಗಿ ನೇಮಿಸಿದೆ.
ಶಾ ದಂಢರಿಯಾ ಸಂಸ್ಥೆ ಅದಾನಿ ಎಂಟರ್‌ಪ್ರೈಸಸ್ ಲೆಕ್ಕಪರಿಶೋಧನೆಯಿಂದಲೂ ಕೆಳಗಿಳಿಯುವುದೇ ಎಂಬುದು ತಿಳಿದು ಬಂದಿಲ್ಲ.







