ರಾಜ್ಯದಲ್ಲಿ 4 ವರ್ಷಗಳಲ್ಲಿ 1500 ದೇವಾಲಯ ಕೆಡವಿದ ಬಿಜೆಪಿ ಸರ್ಕಾರ: ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪ
ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರವು ಕಳೆದ 4 ವರ್ಷದ ಅವಧಿಯಲ್ಲಿ 1500 ದೇವಸ್ಥಾನಗಳನ್ನು ಒಡೆದು ಹಾಕಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಂಜನಗೂಡಿನಲ್ಲಿ 3 ಸಾವಿರ ಹಳೆಯ ಹನುಮಂತನ ದೇವಾಲಯ ಕೆಡವಿದವರು ಯಾರು? ಇದನ್ನು ಕೆಡವಿದವರು ಬಿಜೆಪಿ ಸರ್ಕಾರ. ಇದನ್ನು ವಿಹೆಚ್ ಪಿ, ಬಜರಂಗದಳ ಯಾಕೆ ವಿರೋಧಿಸಲಿಲ್ಲ? ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣಕ್ಕೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು 150 ವರ್ಷಗಳ ಹಳೆಯ ಹನುಮಂತನ ದೇವಾಲಯವನ್ನು ಜ.27, 2020ರಂದು ಕೆಡವಿದ್ದರು. ಇದರ ವಿರುದ್ಧ ವಿಹೆಚ್ ಪಿ ಹಾಗೂ ಬಜರಂಗದಳದವರು ಹೋರಾಟ ಮಾಡಿದ್ದರೆ? ಶಿವಮೊಗ್ಗ ನಗರದಲ್ಲಿ ಫೆ.17, 2021ರಂದು ಹಳೆಯ ದೇವಾಲಯ ಕೆಡವಲಾಗಿತ್ತು. ಇದರ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತೇ? ಆಗ ಹನುಮಾನ್ ಚಾಲೀಸ ಪಠಿಸಲಾಗಿತ್ತೇ? ಎಂದು ಕಿಡಿಕಾರಿದರು.
'ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಫೆ.28, 2022ರಂದು ಬಿಜೆಪಿ ಹನುಮ ದೇವಾಲಯ ಕೆಡವಿತ್ತು. ಇದರ ವಿರುದ್ಧ ಪ್ರತಿಭಟನೆ ನಡೆದಿತ್ತೇ? ಇಲ್ಲ. 1500 ದೇವಾಲಯಗಳನ್ನು ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಕೆಡವಿದೆ. ಇದರ ಬಗ್ಗೆ ಮೋದಿ ಅವರು ಮಾತನಾಡಿದ್ದಾರಾ?' ಎಂದು ಪ್ರಶ್ನಿಸಿದರು.
'ಬಜರಂಗದಳದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿ ಹಾಗೂ ಅದರ ನಾಯಕರಿಗೆ ಹನುಮಾನ್ ಚಾಲೀಸ ಓದಲು ಬರುವುದಿಲ್ಲ. ಅವರಿಗೆ 40% ಕಮಿಷನ್ ತೆಗೆದುಕೊಳ್ಳುವುದಷ್ಟೇ ಗೊತ್ತು. ಮೋದಿ ಅವರಿಗೆ ಕೆಲವು ಪ್ರಶ್ನೆ ಕೇಳಲು ಬಯಸುತ್ತೇನೆ. ಮೋದಿ ಅವರೇ ನಾನು ಮಹಾರಾಷ್ಟ್ರದ ಕಪಿಸ್ಥಳದಿಂದ ಬಂದಿದ್ದೇನೆ. ಬಜರಂಗದಳವನ್ನು ಹನುಮಂತನಿಗೆ ಹೋಲಿಕೆ ಮಾಡುವುದು ಹನುಮಂತನಿಗೆ ಮಾಡಬಹುದಾದ ದೊಡ್ಡ ಅಪಮಾನ. ಹನುಮಂತ ಕರ್ತವ್ಯನಿಷ್ಠೆ, ಸೇವೆಯ ಪ್ರತೀಕವಾಗಿದ್ದಾರೆ. ಹನುಮಂತ ತ್ಯಾಗದ ಪ್ರತೀಕ. ಹನುಮಂತ ಬೇರೆಯವರ ಕಷ್ಟಗಳನ್ನು ತನ್ನದೆಂದು ಭಾವಿಸುತ್ತಾರೆ. ಇಂತಹ ಹನುಮಂತನನ್ನು ಹಿಂಸಾಚಾರ ಮಾಡುವವರ ಜತೆ ಹೋಲಿಕೆ ಮಾಡುವುದು ಹನುಮಂತನಿಗೆ ಮಾಡುವ ಅಗೌರವ. ಇದರಿಂದ ಲಕ್ಷಾಂತರ ಹನುಮ ಭಕ್ತರಿಗೆ ನೋವಾಗಿದೆ. ಹೀಗಾಗಿ ಅವರು ಕ್ಷಮೆ ಕೇಳಬೇಕು' ಎಂದು ಆಗ್ರಹಿಸಿದರು.
'ಪ್ರಧಾನಮಂತ್ರಿಗಳೇ ನೀವು ಕರ್ನಾಟಕ ರಾಜ್ಯದಲ್ಲಿದ್ದು, ನಿಮ್ಮ ಶಾಸಕರು ಖರ್ಗೆ ಅವರ ಸಾವು ಬಯಸುತ್ತಿದ್ದು, ನೀವು ಮೌನವಾಗಿರುವುದೇಕೆ? ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ಬಿಜೆಪಿ ಹಾಗೂ ಅದರ ನಾಯಕರು ಕಾಂಗ್ರೆಸ್ ನಾಯಕರನ್ನು ಅಪಮಾನಿಸುವ ಪ್ರವೃತ್ತಿ ಬೆಳೆಸಿಕೊಂಡಿರುವುದೇಕೆ? ಸೋನಿಯಾ ಗಾಂಧಿ ಅವರಿಂದ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ನಿರಂತರವಾಗಿ ಅಪಮಾನಿಸುತ್ತಿರುವುದೇಕೆ?' ಎಂದು ಪ್ರಶ್ನಸಿದರು.