ಜೀವಬೆದರಿಕೆ ಹಿನ್ನೆಲೆ: ಹೈಕೋರ್ಟ್ ನ್ಯಾಯವಾದಿಗೆ ಭದ್ರತೆ ನೀಡುವಂತೆ ನಿರ್ದೇಶಿಸಿದ ಚುನಾವಣಾ ಆಯೋಗ

ಬೆಂಗಳೂರು, ಮೇ 3: ಸತತ ಜೀವ ಬೆದರಿಕೆ ಕರೆ ಬರುತ್ತಿರುವ ಹಿನ್ನೆಲೆ ಹೈಕೋರ್ಟಿನ ನ್ಯಾಯವಾದಿ ಹುಸೈನ್ ಉವೈಸ್ ಅವರಿಗೆ ಭದ್ರತೆ ನೀಡಲು ಕ್ರಮವಹಿಸುವಂತೆ ರಾಜ್ಯ ಚುನಾವಣೆ ಆಯೋಗವೂ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ಸೂಚನೆ ನೀಡಿದೆ.
ಈ ಸಂಬಂಧ ಉಪ ಮುಖ್ಯಚುನಣಾಧಿಕಾರಿ ವಂದನಾ ಭಟ್ ಅವರು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದು, ಹೈಕೋರ್ಟ್ ಆದೇಶದ ಪ್ರಕಾರ ನ್ಯಾಯವಾದಿ ಹುಸೈನ್ ಉವೈಸ್ ಅವರಿಗೆ ಭದ್ರತೆ ನೀಡಲು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಹುಸೈನ್ ಉವೈಸ್, ಆರು ತಿಂಗಳಿನೊಳಗೆ ವಿವಿಧೆಡೆ ಮೂರು ಬಾರಿ ಹಲ್ಲೆಗೆ ಯತ್ನ, ಬೆದರಿಕೆ ಕರೆಗಳು ಬಂದಿವೆ. ಈ ಸಂಬಂಧ ಇಲ್ಲಿನ ಆರ್‍ಟಿನಗರ, ಅಮೃತಹಳ್ಳಿ ಹಾಗೂ ಬಂಗಾರಪೇಟೆ ಸೇರಿ ಇನ್ನಿತರೆ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲಾಗಿದ್ದರೂ, ಯಾವುದೇ ಕ್ರಮವಾಗಿಲ್ಲ. ಜೀವ ಭಯದಲ್ಲಿಯೇ ಅವರು ಓಡಾಟ ನಡೆಸುವ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೊಲೀಸ್ ಭದ್ರತೆ ನೀಡಲು ಆದೇಶ ಹೊರಡಿಸಿದೆ.ಆದರೆ, ಪೊಲೀಸ್ ಇಲಾಖೆ ತಡ ಮಾಡುತ್ತಿದ್ದು, ಇದಕ್ಕೆ ಕಾರಣ ತಿಳಿದು ಬಂದಿಲ್ಲ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ನೆರುವಿಗೆ ಚುನಾವಣೆ ಆಯೋಗ ಧಾವಿಸಿದೆ. ಹೈಕೋರ್ಟಿನ ಆದೇಶದ ಅನ್ವಯ ಪೊಲೀಸ್ ಭದ್ರತೆ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿ ಸುತ್ತೋಲೆಯೂ ಹೊರಡಲಾಗಿದೆ. ಈಗ ಆಯುಕ್ತರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ ಎಂದು ಹೇಳಿದರು.







