ಬಿಯಾಂತ್ ಸಿಂಗ್ ಹತ್ಯೆ ಪ್ರಕರಣ: ದಯಾಭಿಕ್ಷೆ ಕುರಿತು ನಿರ್ಧಾರವನ್ನು ಕೇಂದ್ರಕ್ಕೆ ಬಿಟ್ಟ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಮೇ 3: 1995ರಲ್ಲಿ ಪಂಜಾಬಿನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಹತ್ಯೆಗಾಗಿ ತನಗೆ ವಿಧಿಸಲಾಗಿರುವ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸುವಂತೆ ಕೋರಿ ಬಲವಂತ ಸಿಂಗ್ ರಾಜೋವಾನಾ ಸಲ್ಲಿಸಿರುವ ಅರ್ಜಿಯಲ್ಲಿ ಹಸ್ತಕ್ಷೇಪ ಮಾಡಲು ಬುಧವಾರ ನಿರಾಕರಿಸಿರುವ ಸರ್ವೋಚ್ಚ ನ್ಯಾಯಾಲಯವು,ಆ ಬಗ್ಗೆ ‘ಸೂಕ್ತ ಸಮಯದಲ್ಲಿ ’ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಕೇಂದ್ರಕ್ಕೆ ಬಿಟ್ಟಿದೆ.
2007ರಲ್ಲಿ ರಾಜೋವಾನಾಗೆ ಮರಣ ದಂಡನೆಯನ್ನು ವಿಧಿಸಲಾಗಿದ್ದು, 2012ರಿಂದಲೂ ಆತನ ದಯಾಭಿಕ್ಷೆ ಅರ್ಜಿ ಬಾಕಿಯಾಗಿದೆ.
‘ದಯಾಭಿಕ್ಷೆ ಅರ್ಜಿಯ ಕುರಿತು ನಿರ್ಧಾರವನ್ನು ಮುಂದೂಡುವ ಗೃಹ ಸಚಿವಾಲಯದ ನಿಲುವನ್ನು ನಾವು ಗಮನಿಸಿದ್ದೇವೆ. ವಾಸ್ತವದಲ್ಲಿ ಅದು ಸದ್ಯಕ್ಕೆ ಪರಿಹಾರ ನೀಡಿಕೆಗೆ ನಿರಾಕರಣೆಗೆ ಸಮನಾಗಿದೆ. ಅಗತ್ಯವೆಂದು ಭಾವಿಸಿದ ಸಮಯದಲ್ಲಿ ದಯಾಭಿಕ್ಷೆ ಅರ್ಜಿಯ ಕುರಿತು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುವಂತೆ ನಾವು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದೇವೆ ’ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ.
2019ರಲ್ಲಿ ಗುರು ನಾನಕ್ ದೇವ್ ಅವರ 550ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ರಾಜೋವಾನಾನ ಮರಣ ದಂಡನೆಯನ್ನು ಮಾಫಿ ಮಾಡಲು ಸರಕಾರವು ನಿರ್ಧರಿಸಿದ್ದರೂ ಆತನ ದಯಾಭಿಕ್ಷೆ ಅರ್ಜಿಯು ಅತಂತ್ರವಾಗಿದೆ.







