ಆಪರೇಷನ್ ಕಾವೇರಿ: ಸುಡಾನ್‌ನಿಂದ ಭಾರತಕ್ಕೆ ಮರಳಿದ 231 ಜನರ ಇನ್ನೊಂದು ತಂಡ

ಹೊಸದಿಲ್ಲಿ,ಮೇ 3: ಸಂಘರ್ಷ ಪೀಡಿತ ಸುಡಾನ್ನಲ್ಲಿ ಸಿಕ್ಕಿಕೊಂಡಿರುವ ಭಾರತೀಯರನ್ನು ತೆರವುಗೊಳಿಸಲು ಕೇಂದ್ರವು ಹಮ್ಮಿಕೊಂಡಿರುವ ಆಪರೇಷನ್ ಕಾವೇರಿಯಡಿ ಬುಧವಾರ ಒಟ್ಟು 231 ಭಾರತೀಯರು ವಾಣಿಜ್ಯ ವಿಮಾನದ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ. 231 ಭಾರತೀಯರನ್ನು ಹೊತ್ತ ವಿಮಾನ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟಿಸಿದ್ದಾರೆ.
ಆಪರೇಷನ್ ಕಾವೇರಿ’ಯಡಿ ಭಾರತವು ಖರ್ತೂಮ್ ನ ಸಂಘರ್ಷ ಪೀಡಿತ ಮತ್ತು ತೊಂದರೆಗೆ ಸಿಲುಕಿರುವ ಇತರ ಪ್ರದೇಶಗಳಲ್ಲಿಯ ತನ್ನ ಪ್ರಜೆಗಳನ್ನು ಬಸ್ ಗಳ ಮೂಲಕ ಪೋರ್ಟ್ ಸುಡಾನ್ ಗೆ ಸಾಗಿಸುತ್ತಿದ್ದು, ಅಲ್ಲಿಂದ ಅವರನ್ನು ಭಾರತೀಯ ವಾಯುಪಡೆಯ ವಿಮಾನಗಳು ಮತ್ತು ಭಾರತೀಯ ನೌಕಾಪಡೆಯ ಹಡಗುಗಳ ಮೂಲಕ ಜಿದ್ದಾಕ್ಕೆ ರವಾನಿಸಲಾಗುತ್ತಿದೆ. ಜಿದ್ದಾದಿಂದ ವಾಣಿಜ್ಯ ವಿಮಾನಗಳು ಮತ್ತು ವಾಯಪಡೆಯ ವಿಮಾನಗಳ ಮೂಲಕ ಸ್ವದೇಶಕ್ಕೆ ಕರೆತರಲಾಗುತ್ತಿದೆ.
ಈವರೆಗೆ ಒಟ್ಟು 2,930 ಭಾರತೀಯರನ್ನು ಸುಡಾನ್ ನಿಂದ ತೆರವುಗೊಳಿಸಿ ಸ್ವದೇಶಕ್ಕೆ ಕರೆತರಲಾಗಿದೆ.
Next Story





